ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಡಿಜಿಟಲ್ ಹವಾಲಾ ಜಾಲವನ್ನು ಭದ್ರತಾ ಏಜನ್ಸಿಗಳು ಪತ್ತೆ ಹಚ್ಚಿವೆ. ಇದರ ಭಾಗವಾಗಿ ಅಂತಾರಾಷ್ಟ್ರೀಯ ವಂಚನೆ ಗುಂಪುಗಳ ಆರ್ಥಿಕ ಅಡಿಪಾಯವೆನ್ನಲಾದ 8,000ಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ಕಳೆದ 3 ವರ್ಷಗಳ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದೆ.

ಈ ಖಾತೆಗಳ ಮೂಲಕ ಹರಿದಾಡುತ್ತಿದ್ದ ಹಣವು ಪ್ರತ್ಯೇಕತಾವಾದಿ ಅಥವಾ ದೇಶವಿರೋಧಿ ಕಾರ್ಯಾಚರಣೆಗಳಿಗೆ ಬಳಕೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರಿಗೆ ಕಮೀಷನ್ ಆಸೆ ತೋರಿಸಿ, ವಂಚಕರು ಇಂತಹ ಸಾವಿರಾರು ಖಾತೆಗಳನ್ನು ತೆರೆದಿದ್ದಾರೆ. ಯಾರದ್ದೋ ಹೆಸರಿನಲ್ಲಿರುವ ಖಾತೆಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಜಾಲವು ಪ್ರತಿ ಖಾತೆಯಲ್ಲಿ ಸಣ್ಣ ಸಣ್ಣ ವ್ಯವಹಾರ ನಡೆದಿದೆ ಎಂಬಂತೆ ತೋರಿಸಿ ಯಾವುದೇ ಅನುಮಾನ ಬಾರದಂತೆ ಒಂದೇ ದಿನದಲ್ಲಿ 40 ಲಕ್ಷ ರೂ.ಗಳಷ್ಟು ಅಕ್ರಮವಾಗಿ ವರ್ಗಾಯಿಸಲು ಶಕ್ತವಾಗಿತ್ತು ಎನ್ನಲಾಗಿದೆ.
ಹಣದ ವಹಿವಾಟು ಅಪಾಯಕಾರಿಯಾದ್ದರಿಂದ ಡಿಜಿಟಲ್ ವ್ಯವಹಾರಕ್ಕೆ ಇಳಿದಿದ್ದ ಜಾಲವು, ಅಕ್ರಮ ಹಣವನ್ನು ಕ್ರಿಸ್ಟೋ ಕರೆನ್ಸಿಗಳಿಗೆ ಬದಲಾಯಿಸುತ್ತಿತ್ತು. ಆದರೆ ಬ್ಯಾಂಕ್ ಖಾತೆಗಳಿಲ್ಲದೆ ಕ್ರಿಪ್ಪೋಗೆ ಹಣವನ್ನು ಪರಿವರ್ತಿಸಲು ಸಾಧ್ಯವಿಲ್ಲದ ಕಾರಣ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿರಬಹುದು ಎಂದು ಶಂಕಿಸಲಾಗಿದೆ.




