ಕಾಸರಗೋಡು: ಪತ್ನಿಯನ್ನು ಪತಿಯೇ ಇರಿದು ಕೊಲೆಗೈದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಮೃತಪಟ್ಟ ಯುವತಿ ಕಾಸರಗೋಡು ಜಿಲ್ಲೆಯ ಬಂದಡ್ಕ ಪೇಟೆಯ ಸಮೀಪದ ಕಾವೇರಿ ಎಂಬವರ ಪುತ್ರಿ ರತಿ ಯಾನೆ ಆರತಿ(36)ಎಂದು ತಿಳಿದು ಬಂದಿದೆ.

ಈಕೆಯ ಪತಿ ಜಿನು ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಜುಲೈ 31ರಂದು ರಾತ್ರಿ 10.25 ರ ವೇಳೆ ಈ ಘಟನೆ ನಡೆದಿದೆ.
17 ವರ್ಷಗಳ ಹಿಂದೆ ಜಿನು- ಆರತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮದ್ಯೆ ದಂಪತಿಯ ಜೀವನದಲ್ಲಿ ಒಡಕು ಕಾಣಿಸಿಕೊಂಡಿದ್ದು ಆರತಿ ಬೇರೊಂದು ಕಡೆ ಮನೆ ಕೆಲಸ ಮಾಡುತ್ತಾ ಅಲ್ಲೇ ಇರುತ್ತಿದ್ದಳು.
ಪತಿ ಜಿನು ಆಕೆ ವಾಸವಾಗಿದ್ದ ಮನೆಗೆ ಅತಿಕ್ರಮಿಸಿ ಪತ್ನಿಯನ್ನು ಇರಿದು ಕೊಲೆಗೈದನೆನ್ನಲಾಗಿದೆ. ಅನಂತರ ಜಿನು ಈ ಮಾಹಿತಿಯನ್ನು ಗೆಳೆಯರಿಗೂ ಪೊಲೀಸರಿಗೂ ನೀಡಿದ್ದಾನೆ. ಆ ಬಳಿಕ ಪೊಲೀಸರು ಜಿನುವನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.




