ಉಡುಪಿ: ದೇಶದಲ್ಲೀಗ ಇರುವುದು ಎರಡೇ ಮಾದರಿ, ಒಂದು ಕಾಂಗ್ರೆಸ್ ನ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯವರ ಚೊಂಬು ಮಾದರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಲೇವಡಿ ಮಾಡಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್ ನಲ್ಲಿ ಚೊಂಬು ಹಿಡಿದುಕೊಂಡು ಸುದ್ದಿಗೋಷ್ಠಿ ನಡೆಸಿದ ಅವರು, ನಾವು ರಾಜ್ಯದ ರೈತರಿಗೆ ಅನುಕೂಲವಾಗಲು ಬರ ಪರಿಹಾರ ಕೇಳಿದೆವು ಆದರೆ ಮೋದಿಜಿ ನಮಗೆ ಚೊಂಬು ಕೊಟ್ಟರು. 15ನೇ ಹಣಕಾಸು ಆಯೋಗದ 58,000 ಕೋಟಿ ರೂ. ಕೇಳಿದರೆ ಮೋದಿಜಿ ನಮಗೆ ಚೊಂಬು ಕೊಟ್ಟರು, ರಾಜ್ಯದಿಂದ ನೂರು ರೂಪಾಯಿ ತೆರಿಗೆ ಕಟ್ಟಿದರೆ ನಮಗೆ ಕೇವಲ 13 ರೂ. ಕೊಡುತ್ತಿದ್ದಾರೆ. ಇದರಲ್ಲಿ ಅನ್ಯಾಯ ಆಗಿದೆ ಎಂದರೆ ಮೋದಿಜಿ ನಮಗೆ ಚೊಂಬು ಕೊಟ್ಟರು ಎಂದು ಲೇವಡಿ ಮಾಡಿದರು.
ಇನ್ನು ಭದ್ರಾ ಅಣೆಕಟ್ಟಿಗೆ ಅನುದಾನ ಕೇಳಿದಾಗ, ಬೆಂಗಳೂರು ಅಭಿವೃದ್ಧಿಗಾಗಿ ಅನುದಾನ ಕೇಳಿದಾಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೇಳಿದಾಗ, ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಿದಾಗ ಮೋದಿಜಿ ನಮಗೆ ಚೊಂಬು ಕೊಟ್ಟರು ಎಂದು ವ್ಯಂಗ್ಯವಾಡಿದರು.