’ಗೆಳೆಯನ ಜೊತೆ ಮದುವೆಯಾಗುತ್ತೇನೆ, ನನ್ನ ತಂದೆಯಿಂದ ನನ್ನನ್ನು ಕಾಪಾಡಿ..’ ಪೊಲೀಸರ ಮೊರೆ ಹೋದ ಮೊನಾಲಿಸಾ..!

Share with

ತಿರುವನಂತಪುರ (ಕೇರಳ): ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ವೇಳೆ ರುದ್ರಾಕ್ಷಿ ಮಾಲೆಗಳ ಮಾರುತ್ತಿದ್ದ ಯುವತಿ ತನ್ನ ವಿಶಿಷ್ಟ ಕಣ್ಣು ಹಾಗೂ ನಗು ಮೊಗದಿಂದ ಹಲವರ ಗಮನಸೆಳೆದು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಕೆಲವೇ ದಿನಗಳಲ್ಲಿ ಪ್ರಖ್ಯಾತಿ ಗಳಿಸಿದ ಮೊನಾಲಿಸಾ ಭೋಂಸ್ಥೆ ಎನ್ನುವ ಯುವತಿ ಮತ್ತೆ ಸುದ್ದಿಯಲ್ಲಿದ್ದಾರೆ.

ನಾನು ನನ್ನ ಗೆಳೆಯನ ಜತೆ ಇದ್ದೇನೆ. ಅವನನ್ನೇ ಮದುವೆಯಾಗಬೇಕು ಎಂದಿದ್ದು, ದಯವಿಟ್ಟು ನನ್ನ ತಂದೆಯಿಂದ ನನ್ನನ್ನು ಕಾಪಾಡಿ ಎಂದು ತಿರುವನಂತಪುರ ಪೊಲೀಸರ ಮೊರೆ ಹೋಗಿದ್ದಾಳೆ.

ಬುಧವಾರ (ಮಾ.11) ತಂಪನೂರು ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡ ಮೊನಾಲಿಸಾ, ನಾನು ಸಿನಿಮಾ ಚಿತ್ರೀಕರಣವೊಂದರ ಭಾಗವಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ತಂದೆ ನನ್ನನ್ನು ಬಲವಂತವಾಗಿ ನಮ್ಮ ಊರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾಳೆ.

ಚಿತ್ರ ತಂಡದೊಂದಿಗೆ ತೆರಳಿ ರಕ್ಷಣೆಗೆ ಮನವಿ:

ಮೊನಾಲಿಸಾ ಹಾಗೂ ಉತ್ತರ ಪ್ರದೇಶ ಮೂಲದ ಅವಳ ಸ್ನೇಹಿತನು ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೋರಿದ್ದಾರೆ. ಅವಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಮೊನಾಲಿಸಾ ತಂದೆಯು ಅವಳನ್ನು ಮರಳಿ ಕರೆಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದ್ದಾಳೆ. ಈ ವೇಳೆ ಸಿನಿಮಾದ ಇತರೆ ಚಿತ್ರ ತಂಡದ ಸಿಬ್ಬಂದಿ ಕೂಡ ಠಾಣೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಿನಿಮಾದ ಚಿತ್ರೀಕರಣಕ್ಕಾಗಿ ಅವರಿಬ್ಬರು ಕೇರಳಕ್ಕೆ ಬಂದಿದ್ದಾರೆ. ತನ್ನ ಗೆಳೆಯನೊಂದಿಗೆ ಮದುವೆಯಾಗುವುದಾಗಿ ಮೊನಾಲಿಸಾ ತಿಳಿಸಿದ್ದು, ಅವಳು ತನ್ನ ತಂದೆಯೊಂದಿಗೆ ತೆರಳುವುದಕ್ಕೆ ನಿರಾಕರಿಸಿದ್ದಾಳೆ. ಅವಳು ಅಪ್ರಾಪ್ತಯಲ್ಲದೇ ಇರುವುದಿಂದ, ಅವಳಿಷ್ಟದಂತೆ ಅವಳು ನಿರ್ಧಾರ ತೆಗೆದುಕೊಳ್ಳಬಹುದು. ಅವಳ ತಂದೆ ಈಗಾಗಲೇ ಅವರ ಊರಿಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ವೇಳೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಇಂದೋರ್ ಮೂಲದ ವರ್ಚುವಲ್ ಕಂಟೆಂಟ್ ಕ್ರಿಯೇಟರ್ ಮೊನಾಲಿಸಾ ಭೋಂಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.


Share with

Leave a Reply

Your email address will not be published. Required fields are marked *