
ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್, ದೀಪಾವಳಿ ಆಚರಣೆಯ ಮೊದಲ ದಿನವಾಗಿದೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಡಂಭರದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು ಭಗವಂತನಿಗೆ ಹತ್ತು ಅವತಾರಗಳು ಎಂದು ಹೇಳುವುದಿದೆ. ಹಿಂದಿನ ಮನ್ವಂತರದ್ದೂ ಸೇರಿದಂತೆ ವೇದವ್ಯಾಸ, ಕಪಿಲ, ಮಹೀದಾಸ, ದತ್ತಾತ್ರೇಯ ಒಟ್ಟು 23 ಅವತಾರಗಳನ್ನು ಹೆಸರಿಸಲಾಗುತ್ತದೆ. ಇದರಲ್ಲಿ ಆಯುರ್ವೇದ ಪ್ರವರ್ತಕನೆನಿಸಿದ ಧನ್ವಂತರಿ ಅವತಾರವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಹಾಗಾಗಿ ಧನತೇರಸ್ ಹಬ್ಬವನ್ನು ಈ ಧನ್ವಂತರಿ ಜಯಂತಿಯ ದಿನ ಆಚರಣೆ ಮಾಡಲಾಗುತ್ತದೆ.

ಆರೋಗ್ಯದಲ್ಲಿ ಸುಧಾರಣೆ
ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ. ಜೊತೆಗೆ ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ಹೇಳಲಾಗುತ್ತದೆ. ಈ ದೇವರನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಅದಲ್ಲದೆ ಪ್ರತಿನಿತ್ಯ ಆರೋಗ್ಯಕ್ಕೆ ಶಕ್ತಿಯುತವಾದ ಧನ್ವಂತರಿ ಸ್ತೋತ್ರ ಪಾರಾಯಣ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಎಷ್ಟೋ ಸುಧಾರಣೆಯಾಗುತ್ತದೆ ಎಂದು ನಂಬಲಾಗಿದೆ.




