ಉಡುಪಿ: ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನೇಕಾರರ ಸೇವಾ ಕೇಂದ್ರ ಬೆಂಗಳೂರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋಸಾಫ್ಟ್ (ಸಿಎಸ್ ಆರ್ ನಿಧಿ) ಇವರ ಸಹಕಾರದೊಂದಿಗೆ ನೂತನ ಬೃಹತ್ ಕೈಮಗ್ಗ ನೇಯ್ಗೆ ಕೇಂದ್ರ ಆ್ಯಂಡ್ ಮಹಿಳೆಯರಿಗಾಗಿ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿಯ ಉದ್ಘಾಟನೆ ಇದೇ ಫೆ.24ರಂದು ಬೆಳಿಗ್ಗೆ 10.30ಕ್ಕೆ ಉಡುಪಿಯ ಬನ್ನಂಜೆ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ನಡೆಯಲಿದೆ ಎಂದು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಹೇಳಿದರು.
ಉಡುಪಿಯಲ್ಲಿ ಫೆ.22ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿಯಲ್ಲಿ ನೂರು ಹೊಸ ನೇಕಾರರನ್ನು ಈ ಉದ್ಯಮಕ್ಕೆ ಕರೆತರುವ ಸಂಕಲ್ಪ ಮಾಡಿದ್ದು, ಈಗಾಗಲೇ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ 25 ಯುವತಿಯರಿಗೆ ಶಿಷ್ಯ ವೇತನ, ಊಟ, ಉಪಹಾರ ಮತ್ತು ಪ್ರಯಾಣ ಭತ್ಯೆಯನ್ನು ಭರಿಸಿ ಆರಂಭಿಸಿದ ಮೊದಲ ಹಂತದ ತರಬೇತಿ ಕಾರ್ಯಾಗಾರ ಮುಗಿದಿದೆ.
22 ಹೊಸ ನೇಕಾರರು ಈಗಾಗಲೇ ವೃತ್ತಿಪರ ನೇಕಾರರಾಗಿ ನೇಯ್ಕೆ, ಕಾಯಕವನ್ನು ಆರಂಭಿಸಿದ್ದಾರೆ. ಇದೀಗ 30 ಹೊಸಶಿಬಿರಾರ್ಥಿಗಳಿಗಾಗಿ 2ನೇ ಹಂತದ 6 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಜಾಗವನ್ನು ಪಡೆದು, 50 ಕೈಮಗ್ಗಗಳನ್ನು ಅಳವಡಿಸಿ ಉತ್ಪಾದನೆ ಮತ್ತು ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಮಂಜುನಾಥ್ ಮಣಿಪಾಲ್, ಪ್ರೇಮಾನಂದ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಿಇಒ ದಿನೇಶ್ ಉಪಸ್ಥಿತರಿದ್ದರು.