ಕಾಸರಗೋಡು: ವಿಶ್ವ ಬ್ರಾಹ್ಮಣ ಯುವಕ ಸಂಘದ ನೇತೃತ್ವದಲ್ಲಿ ಆಧುನಿಕತೆಯೊಂದಿಗೆ “ವಿಶ್ವರೂಪಂ -2024” ಯುವ ಸಮಾವೇಶ ಆಯೋಜಿಸಲಾಗುತ್ತಿದ್ದು ಇದರ ಪೂರ್ವಭಾವಿಯಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಪ್ರತಿ ವಾರ ಹಮ್ಮಿಕೊಳ್ಳುತ್ತಿದ್ದು ಉದ್ಘಾಟನಾ ಕಾರ್ಯಕ್ರಮ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಜರಗಿತು.


ಮಧೂರು ಮಠದ ಮಾಜಿ ಅಧ್ಯಕ್ಷ ಮಠದ ಮನೆ ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಆಧುನಿಕತೆಯೊಂದಿಗೆ ಸಾಗುತ್ತಿರುವ ವಿಶ್ವಕರ್ಮ ಜನಾಂಗದ ಯುವಪೀಳಿಗೆ ಕುಲಕಸುಬು, ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಒತ್ತು ನೀಡಿ ಸಶಕ್ತ ಸಮಾಜದ ನಿರ್ಮಾಣಕ್ಕೆ ಯುವಸಮಾಜದ ಒಂದುಗೂಡುವಿಕೆ ಅತ್ಯಗತ್ಯವಾಗಿದೆ” ಎಂದರು.
ಮಠದ ಪ್ರದಾನ ಅರ್ಚಕರಾದ ಪುರೋಹಿತ ವಾಸುದೇವ ಆಚಾರ್ಯ ಅವರು ಧ್ವಜಾರೋಹಣ ಮಾಡುವುದರ ಮೂಲಕ ಸ್ಪರ್ದಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಶ್ವಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಆಚಾರ್ಯ ಮಧೂರು, ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಅದ್ಯಕ್ಷರಾದ ಶ್ರೀಮತಿ ಪುಷ್ಪಲತಾ ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷರಾದ ತಾರಾನಾಥ ಆಚಾರ್ಯ ಉಪಸ್ಥಿತರಿದ್ದರು.
ವಿಶ್ವಬ್ರಾಹ್ಮಣ ಯುವಕ ಸಂಘದ ಕಾರ್ಯದರ್ಶಿ ಶ್ರೀ ವರಪ್ರಸಾದ್ ಆಚಾರ್ಯ ಕಂಬಾರು ಸ್ವಾಗತಿಸಿ, ವಿಶ್ವರೂಪಂ ಯುವಸಮಾವೇಶದ ಸಂಚಾಲಕ ಕಿರಣ್ ಕುಮಾರ್ ಶರ್ಮ ವಂದಿಸಿದರು. ಬಳಿಕ ನಡೆದ ವಿವಿಧ ಕಲಾ, ಸಾಹಿತ್ಯ ಸ್ಪರ್ದೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಿದರು. ಜ.7ರಂದು ಕೂಡ್ಲು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ, ಜ.14ಕ್ಕೆ ಮಧೂರು ಮಠದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು, ಜ.21ಕ್ಕೆ ಕರಕುಶಲ ಸ್ಪರ್ಧೆಗಳು, ಜ.28ಕ್ಕೆ ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಫೆಬ್ರವರಿ 11ರಂದು “ವಿಶ್ವರೂಪಂ” ಬೃಹತ್ ಯುವ ಸಮಾವೇಶವು ಮಧೂರಿನಲ್ಲಿ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




