ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲೊಂದು ಪ್ಲಾಟ್ಫಾರ್ಮ್ ಏರಿದ ಘಟನೆ ಸೆ.26 ರಂದು ನಡೆದಿತ್ತು. ಈ ಘಟನೆಗೆ ರೈಲು ನಿರ್ವಾಹಕನ ಬೇಜವಾಬ್ದಾರಿಯೇ ಕಾರಣ ಎಂಬ ಅಂಶ ಹಿರಿಯ ಅಧಿಕಾರಿಗಳ ತನಿಖೆಯಿಂದ ಬಯಲಿಗೆ ಬಂದಿದೆ. ಇದಕ್ಕೆ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯವೇ ಈಗ ಸಾಕ್ಷ್ಯವಾಗಿ ಲಭ್ಯವಾಗಿದೆ.
ಎಲೆಕ್ಟ್ರಿಕ್ ಮಲ್ಟಿಪಲ್ ಘಟಕ (ಇಎಂಯು) ರೈಲು ಮಂಗಳವಾರ ಹಳಿ ತಪ್ಪಿ ಪ್ಲಾಟ್ಫಾರ್ಮ್ ಮೇಲೆ ಹತ್ತಿತ್ತು. ಎಂಜಿನ್ ಕ್ಯಾಬ್ ಪ್ರವೇಶಿಸಿದ ಬಳಿಕ ಆಪರೇಟರ್, ತನ್ನ ಬ್ಯಾಗ್ ಅನ್ನು ಥ್ರೋಟಲ್(ಕಂಟ್ರೋಲರ್) ಮೇಲೆ ಇರಿಸಿ, ಮೊಬೈಲ್ನಲ್ಲಿ ವಿಡಿಯೋ ಕಾಲ್ನಲ್ಲಿರುವ ದೃಶ್ಯ ಇಂಜಿನ್ ಒಳಗಿರುವ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವಘಡಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಾಗಿದೆ.
ಕಳೆದ ಮಂಗಳವಾರ ರಾತ್ರಿ ಮಥುರಾ ಜಂಕ್ಷನ್ ರೈಲು ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಮೊದಲು ಕರ್ತವ್ಯದಲ್ಲಿ ಚಾಲಕ ತನ್ನ ಕರ್ತವ್ಯ ಮುಗಿಸಿ ಕ್ಯಾಬಿನ್ನಿಂದ ನಿರ್ಗಮಿಸಿದ್ದ. ಬಳಿಕ ಕ್ಯಾಬ್ ಒಳಗೆ ಪ್ರವೇಶಿಸಿದ ರೈಲ್ವೆ ಸಿಬ್ಬಂದಿ ಸಚಿನ್ ಎಂಬಾತ, ವಿಡಿಯೋ ಕಾಲ್ನಲ್ಲಿದ್ದುಕೊಂಡೇ ತನ್ನ ಬೆನ್ನಲ್ಲಿದ್ದ ಬ್ಯಾಗನ್ನು ಕಂಟ್ರೋಲರ್ ಮೇಲೆ ಇರಿಸಿ, ಆಸನದಲ್ಲಿ ಕುಳಿತಿದ್ದು, ಆ ಬಳಿಕ ಈ ಘಟನೆ ನಡೆದಿದೆ.
ರಾತ್ರಿ ನಡೆದ ಈ ಅವಘಡದಲ್ಲಿ ಅದೃಷ್ಟವಶಾತ್ ಈ ಅವಘಡಕ್ಕಿಂತ ಸ್ವಲ್ಪವೇ ಮೊದಲು ಪ್ರಯಾಣಿಕರು ಇಳಿದು ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದರು.