ಪ್ಯಾರಿಸ್ ಒಲಿಂಪಿಕ್ಸ್‌ ಭದ್ರತೆಯಲ್ಲಿ ಭಾರತದ ಎರಡು ಶ್ವಾನಗಳೂ ಇವೆ

Share with

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್, 2024 ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಿಗದಿಯಾಗಿದ್ದು, ವರ್ಣ ರಂಜಿತ ಕ್ರೀಡಾಲೋಕ ಅನಾವರಣಗೊಳ್ಳಲಿದೆ. ಅತಿ ದೊಡ್ಡ ಕ್ರೀಡಾಕೂಟಕ್ಕೆ ಉಗ್ರರ ದಾಳಿಯ ಭೀತಿಯೂ ಇದ್ದು ಪ್ಯಾರಿಸ್ ನಾದ್ಯಂತ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗೆ ಫ್ರಾನ್ಸ್ ನೊಂದಿಗೆ ಭಾರತದ ಯೋಧರು ಕೈಜೋಡಿಸಿದ್ದು ತಂಡದಲ್ಲಿ ತರಬೇತಾದ ಎರಡು ಶ್ವಾನಗಳು ಕೆಲಸ ಮಾಡುತ್ತಿವೆ. ಪ್ಯಾರಿಸ್ ನ ಕ್ರೀಡಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಭದ್ರತೆ ಒದಗಿಸುವ ಸಲುವಾಗಿ ಆಯ್ಕೆ ಮಾಡಲಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಎರಡು K9 ತಂಡಗಳು ಜುಲೈ 10 ರಂದು ಪ್ಯಾರಿಸ್‌ಗೆ ತೆರಳಿದ್ದು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿವೆ.

K9 ನ ತಂಡದಲ್ಲಿ ಗಮನ ಸೆಳೆಯುವ ವಾಸ್ಟ್ ಮತ್ತು ಮತ್ತು ಡೆನ್ ಬೈ ಎನ್ನುವ ತರಬೇತಾದ ಎರಡು ಶ್ವಾನಗಳೂ ಇವೆ. ಬೆಲ್ಡಿಯನ್ ಶೆಫರ್ಡ್ ಮಾಲಿನೋಯಿಸ್ ತಳಿಯ ಶ್ವಾನಗಳಿಗೆ ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸು. CRPF ಬಳಸಿಕೊಳ್ಳುತ್ತಿರುವ ಈ ಶ್ವಾನಗಳು ತರಬೇತಿ ಶಾಲೆಯಲ್ಲಿ ಕಠಿನ ಕಟ್ಟುನಿಟ್ಟಾದ ಪರೀಕ್ಷೆಗಳು ನಡೆದ ಬಳಿಕ ತಂಡಕ್ಕೆ ಆಯ್ಕೆಯಾಗಿವೆ.

2011 ರಲ್ಲಿ ಪಾಕಿಸ್ಥಾನದಲ್ಲಿ ಒಸಾಮಾ ಬಿನ್ ಲಾಡೆನ್‌ನ ಅಡಗುತಾಣದ ಮೇಲೆ ಅಮೆರಿಕ ನಡೆಸಿದ ರಣ ರೋಚಕ ದಾಳಿಯ ವೇಳೆ ಬೆಲ್ಡಿಯನ್ ಶೆಫರ್ಡ್ ಮಾಲಿನೋಯಿಸ್‌ ನಾಯಿಯ ಸಾಹಸವು ರಾತ್ರೋರಾತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಳಿಗೆ ದೊಡ್ಡ ಖ್ಯಾತಿ ಮತ್ತು ಬೇಡಿಕೆ ಹೆಚ್ಚು ಮಾಡಿತ್ತು. ಈಗ ವಿಶ್ವದ ವಿವಿಧ ದೇಶಗಳಲ್ಲಿ ಮಿಲಿಟರಿ ಮತ್ತು ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ. ಫ್ರಾನ್ಸ್‌ನ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ಸೋಮವಾರ ಪ್ಯಾರಿಸ್‌ನಲ್ಲಿರುವ ಭಾರತದ ಕೆ -9 (canine) ಘಟಕವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶ್ವಾನಗಳೊಂದಿಗೂ ಸಮಯ ಕಳೆದು ಮೆಚ್ಚುಗೆ ವ್ಯಕ್ತಪಡಿಸಿದರು. ಸಶಸ್ತ್ರ ಪಡೆಗಳ ಸಚಿವಾಲಯ (France) ಪ್ರಕಾರ, ಸುಮಾರು ನಲವತ್ತು ವಿದೇಶಿ ಮಿಲಿಟರಿ ಶ್ವಾನ ದಳದ ತಂಡಗಳು ಫ್ರೆಂಚ್ ಪದಾತಿ ದಳದ ಘಟಕದೊಂದಿಗೆ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುತ್ತಿವೆ.


Share with

Leave a Reply

Your email address will not be published. Required fields are marked *