ನ್ಯೂಯಾರ್ಕ್ : ನ್ಯೂಯಾರ್ಕ್ ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ T20 World Cup 2024ನ ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಸೋಲಿನ ನಂತರ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವ ಆತಂಕದಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್ಗಳ ಪತನದ ಕಾರಣ ಹಾಗೂ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಯಿಂದಾಗಿ 20 ಓವರ್‌ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಸೀಂ ಶಾ ಮತ್ತು ಹ್ಯಾರಿಸ್ ರವೂಫ್ ಅವರ ದಾಳಿಯ ಮುಂದೆ ಭಾರತ ತಂಡವು 19 ಓವರ್‌ಗಳಲ್ಲಿ 119 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.