ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧದಲ್ಲಿ ಹೊಸ ಯುಗ ಆರಂಭವಾಗಿದೆ. ಅಮೆರಿಕಕ್ಕೆ ರಫ್ತಾಗುವ ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಈ ಮಹತ್ವದ ಬೆಳವಣಿಗೆಯಿಂದ ಭಾರತದ ರೈತರು, ಸಣ್ಣ ಕೈಗಾರಿಕೆಗಳು (MSME) ಮತ್ತು ಉದ್ಯಮಿಗಳಿಗೆ ಹೊಸ ಮಾರುಕಟ್ಟೆ ಬಾಗಿಲು ತೆರೆದಂತಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಪಿಯೂಷ್ ಗೋಯಲ್, “ಈ ಒಪ್ಪಂದವು ಕೇವಲ ವ್ಯಾಪಾರವಲ್ಲ, ಬದಲಿಗೆ ನಮ್ಮ ದೇಶದ ಶ್ರಮಿಕ ವರ್ಗಕ್ಕೆ ಲಭಿಸಿದ ದೊಡ್ಡ ವಿಜಯ. ‘ವಿನ್ಯಾಸ ಭಾರತದ್ದು, ಉತ್ಪಾದನೆ ಭಾರತದ್ದು ಹಾಗೂ ಅದು ಜಗತ್ತಿಗಾಗಿಯೇ ಇರಲಿದೆ’ (Design in India, Make in India for the World) 2 2 ಕನಸಿಗೆ ಇದು ಪೂರಕವಾಗಿದೆ ಎಂದು ಬಣ್ಣಿಸಿದ್ದಾರೆ.
ಟ್ರಂಪ್-ಮೋದಿ ಫೋನ್ ಸಂವಾದದ ಫಲ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ನಂತರ ಈ ಅಧಿಕೃತ ಘೋಷಣೆ ಹೊರಬಿದ್ದಿದೆ. “ಭಾರತ ನಮ್ಮ ಆಪ್ತ ಮಿತ್ರ ರಾಷ್ಟ್ರ. ಹೀಗಾಗಿ ಪರಸ್ಪರ ಹಿತಾಸಕ್ತಿಯ ದೃಷ್ಟಿಯಿಂದ ಸುಂಕವನ್ನು ಶೇ. 18ಕ್ಕೆ ಇಳಿಸಲು ನಿರ್ಧರಿಸಲಾಗಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.
ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಲ್ಲನ್ ಈ ಬಗ್ಗೆ ಪ್ರತಿಕ್ರಿಯಿಸಿ, “ಕಳೆದ ಕೆಲವು ತಿಂಗಳುಗಳಿಂದ ರಫ್ತು ಕುಸಿತ ಕಂಡು ಆತಂಕದಲ್ಲಿದ್ದ ಉದ್ಯಮಿಗಳಿಗೆ ಈ ಸುದ್ದಿ ಹೊಸ ಭರವಸೆ ನೀಡಿದೆ. ಏಷ್ಯಾದ ಇತರ ಸ್ಪರ್ಧಿ ರಾಷ್ಟ್ರಗಳ ಮುಂದೆ ಭಾರತದ ರಫ್ತು ಶಕ್ತಿ ಈಗ ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.




