ಜನವರಿ 3 ರಿಂದ ಭಾರತ- ಆಫ್ರಿಕಾ ನಡುವೆ ಏಕದಿನ ಸರಣಿ; ವೈಭವ್ಗೆ ನಾಯಕತ್ವ

Share with

ಬಿಸಿಸಿಐನ (BCCI) ಜೂನಿಯರ್ ಪುರುಷರ ಆಯ್ಕೆ ಸಮಿತಿಯು ಡಿಸೆಂಬರ್ 27 ರ ಶನಿವಾರ 2026 ರ ಅಂಡರ್-19 ವಿಶ್ವಕಪ್‌ಗಾಗಿ (U19 World Cup 2026) ಭಾರತ ತಂಡವನ್ನು ಪ್ರಕಟಿಸಿತ್ತು. ಅಂದೇ ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಗೂ ತಂಡವನ್ನು ಪ್ರಕಟಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತ ಯುವ ತಂಡದ ನಾಯಕತ್ವ ವಹಿಸಿಕೊಂಡಿರುವ ಆಯುಷ್ ಮ್ಹಾತ್ರೆ ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದರೆ, ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರನ್ನಾಗಿ ನೇಮಿಸಲಾಗಿದೆ.

2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಮೊದಲ ನಾಯಕತ್ವದ ಸರಣಿ ಇದಾಗಿದೆ. ಅವರ ನಾಯಕತ್ವದಲ್ಲಿ, ಭಾರತ ಯುವ ಪಡೆ ಜನವರಿ 3 ರಂದು ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ಟೀಂ ಇಂಡಿಯಾಗೆ ಅತ್ಯಂತ ಮುಖ್ಯವಾಗಿದೆ. ಈ ಸರಣಿ ವೈಭವ್‌ಗೆ ಬಹಳ ವಿಶೇಷವಾಗಿದ್ದು, ಈ 14 ವರ್ಷದ ಹುಡುಗ ತಮ್ಮ ಬ್ಯಾಟಿಂಗ್‌ನಲ್ಲಿ ಮಿಂಚುವುದು ಮಾತ್ರವಲ್ಲದೆ, ನಾಯಕನಾಗಿಯೂ ಚೊಚ್ಚಲ ಸರಣಿಯಲ್ಲಿ ತಂಡವನ್ನು ಮುನ್ನಡೆಸಬೇಕಾಗಿದೆ

ವೈಭವ್ಗೆ ನಾಯಕತ್ವ ನೀಡಿದ್ಯಾಕೆ?
ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಗಾಯಗೊಂಡ ಕಾರಣ ಎಡಗೈ ಬ್ಯಾಟ್ಸ್‌ಮನ್ ವೈಭವ್‌ಗೆ ಈ ಜವಾಬ್ದಾರಿ ನೀಡಲಾಗಿದೆ. ಮ್ಹಾತ್ರೆ ಇತ್ತೀಚೆಗೆ ಅಂಡರ್ -19 ಏಷ್ಯಾಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ಅವರು ಗಾಯದಿಂದ ಬಳಲುತ್ತಿದ್ದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನರ್ವಸತಿ ಪಡೆಯಲಿದ್ದಾರೆ. ಹೀಗಾಗಿ ಅವರು ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ತಂಡದ ಉಪನಾಯಕ ವಿಹಾನ್ ಮಲ್ಹೋತ್ರಾ ಕೂಡ ಗಾಯದಿಂದ ಬಳಲುತ್ತಿದ್ದು, ಆಯುಷ್ ಅವರಂತೆಯೇ ಸಿಒಇಗೆ ಹಾಜರಾಗಲಿದ್ದಾರೆ. ಆ ನಂತರ ಇಬ್ಬರೂ ವಿಶ್ವಕಪ್ ತಂಡವನ್ನು ಸೇರುತ್ತಾರೆ.


Share with

Leave a Reply

Your email address will not be published. Required fields are marked *