ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗಿನ 18 ಆವೃತ್ತಿಗಳಲ್ಲಿ ಭಾರತ ಗರಿಷ್ಠ 69 ಪದಕಗಳನ್ನು ಗೆದ್ದುಕೊಂಡಿತ್ತು. ಆದರೆ ಬುಧವಾರ ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 7ರವರೆಗೆ ಕ್ರೀಡಾಕೂಟ ನಡೆಯಲಿದ್ದು ಭಾರತದ ಒಟ್ಟು ಪದಕಗಳ ಸಂಖ್ಯೆ ಹೆಚ್ಚಳವಾಗಲಿದೆ.
ಬುಧವಾರ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತವು ಅತ್ಯುತ್ತಮ ಆರಂಭವನ್ನೇ ಪಡೆದಿದೆ. ಮಂಗಳವಾರ 69 ಪದಕಗಳೊಂದಿಗೆ ದಿನವನ್ನು ಅಂತ್ಯಗೊಳಿಸಿದ್ದ ಭಾರತ ಬುಧವಾರ ಸಂಜೆಯ ವೇಳೆಗೆ 12 ಪದಕಗಳನ್ನು ಗೆದ್ದಿದೆ. ಭಾರತವು ಇದೀಗ 18 ಚಿನ್ನದ ಪದಕಗಳನ್ನು ತನ್ನ ಬುಟ್ಟಿಗೆ ಇಳಿಸಿಕೊಂಡಿದ್ದು, ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಸ್ವರ್ಣ ಗೆದ್ದ ದಾಖಲೆಗೂ ಭಾಜನವಾಗಿದೆ.
ಈ ಹಿಂದೆ ಏಶ್ಯನ್ ಗೇಮ್ಸ್ ನಲ್ಲಿ ಭಾರತ ಗರಿಷ್ಠ 16 ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. ಬುಧವಾರ ಭಾರತದ ಪರ ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ), ಮುಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ವರಿಯಥೋಡಿ, ರಾಜೇಶ್ ರಮೇಶ್(ಪುರುಷರ 4X400M ರಿಲೇ) ಮತ್ತು ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಾಸ್ ಡಿಯೋಟಾಲೆ (ಆರ್ಚರಿ ಮಿಶ್ರ ತಂಡ ಕಾಂಪೌಂಡ್) ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಶೋರ್ ಜೆನಾ (ಜಾವೆಲಿನ್ ಥ್ರೋ), ಹರ್ಮಿಲನ್ ಬೈನ್ಸ್ (ಮಹಿಳೆಯರ 800 ಮೀಟರ್), ಅವಿನಾಶ್ ಸಾಬ್ಲೆ (ಪುರುಷರ 5000 ಮೀಟರ್), ವಿತ್ಯಾ ರಾಮರಾಜ್, ಐಶ್ವರ್ಯ ಕೈಲಾಶ್ ಮಿಶ್ರಾ, ಪ್ರಾಚಿ, ಶುಭಾ ವೆಂಕಟೇಶನ್ (ಮಹಿಳೆಯರ 4×400 ಮೀಟರ್ ರಿಲೇ ತಂಡ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಬೆಳ್ಳಿ ಪದಕಗಳನ್ನು ಗೆದ್ದರು. ಸುನಿಲ್ ಕುಮಾರ್ (ಗ್ರೀಕೋ-ರೋಮನ್ ಕುಸ್ತಿ), ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ (ಮಿಶ್ರ ತಂಡ ಸ್ಕ್ವಾಷ್), ರಾಮ್ ಬಾಬೂ ಮತ್ತು ಮನು ರಾಣಿ (35 ಕಿ.ಮೀ ರೇಸ್ ವಾಕ್ ಮಿಶ್ರ ತಂಡ) ಮತ್ತು ಪರ್ವೀನ್ ಹೂಡಾ (ಬಾಕ್ಸಿಂಗ್ ಮಹಿಳೆಯರ 57 ಕೆಜಿ) ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.