ನವದೆಹಲಿ: ಬಾಂಗ್ಲಾದೇಶ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ನಡುವೆಯೇ, ನೆರೆರಾಷ್ಟ್ರ ಬಾಂಗ್ಲಾಗೆ ನೀಡುವ ವಾರ್ಷಿಕ ಆರ್ಥಿಕ ನೆರವಿನಲ್ಲಿ ಕೇಂದ್ರ ಸರ್ಕಾರ ಭಾರೀ ಕಡಿತ ಮಾಡಿದೆ.

ಭಾನುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಬಾಂಗ್ಲಾದೇಶಕ್ಕೆ ಕೇವಲ 60 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಮೊತ್ತವು 120 ಕೋಟಿ ರೂ.ಗಳಷ್ಟಿತ್ತು. ಅಂದರೆ, ಕೇವಲ ಒಂದು ವರ್ಷದಲ್ಲಿ ಭಾರತ ತನ್ನ ನೆರವಿನ ಪ್ರಮಾಣವನ್ನು ಶೇ.50 ರಷ್ಟು ಕಡಿತಗೊಳಿಸಿದಂತಾಗಿದೆ.
ಬಾಂಗ್ಲಾದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಅಲ್ಲಿನ ಹಿಂದೂ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು, ಹತ್ಯೆಗಳೇ ಭಾರತದ ಈ ಕಠಿಣ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೇ, ಬಾಂಗ್ಲಾ ಮಧ್ಯಂತರ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಬೆಳೆಸಲು ಆಸಕ್ತಿ ತೋರುತ್ತಿರುವುದು ಕೂಡ ಈ ನಿರ್ಧಾರಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.




