ಈ ವರ್ಷದ ಬಜೆಟ್ ಭಾಷಣದಲ್ಲಿ ಹೊಸತನ; 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್?

Share with

ನವದೆಹಲಿ, ಜನವರಿ 31: ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ನಾಳೆ ಭಾನುವಾರ ಮಂಡಿಸಲಿರುವ ಬಜೆಟ್ ಹಾಗೂ ಅವರ ಬಜೆಟ್ ಭಾಷಣ (Budget Speech) ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಬಜೆಟ್ ಅನ್ನು ಪ್ರಸ್ತುತಪಡಿಸುವ ರೀತಿ ಬೇರೆ ರೀತಿ ಇರಲಿದೆ. 75 ವರ್ಷಗಳಿಂದ ಇದ್ದ ಬಜೆಟ್ ಭಾಷಣದ ಸ್ವರೂಪ ಬದಲಾಗಲಿದೆ. ಬಜೆಟ್ ಭಾಷಣದ ಎರಡು ಭಾಗಗಳ ಪೈಕಿ ಎರಡನೇ ಭಾಗಕ್ಕೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚು ಒತ್ತು ಕೊಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿದ್ದಾಗಿ ನ್ಯೂಸ್18 ವರದಿ ಮಾಡಿದೆ.

ಬಜೆಟ್ ಭಾಷಣದಲ್ಲಿ ಎರಡು ಭಾಗ ಇರುತ್ತವೆ. ಹಿಂದಿನ ಬಜೆಟ್ಗಳಲ್ಲಿ ಸಚಿವರು ಮೊದಲ ಭಾಗದಲ್ಲಿ ಆರ್ಥಿಕ ಪರಿಸ್ಥಿತಿ, ಹಣಕಾಸು ಸ್ಥಿತಿ, ಪ್ರಮುಖ ನೀತಿ ಘೋಷಣೆ ಇತ್ಯಾದಿ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತಿತ್ತು. ಎರಡನೇ ಭಾಗದಲ್ಲಿ ತೆರಿಗೆ ಇತ್ಯಾದಿ ಅಂಕಿ ಅಂಶಗಳ ಪ್ರಸ್ತುತಿ ಹೆಚ್ಚಾಗಿ ಇರುತ್ತಿತ್ತು. 2026-27ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಸುದೀರ್ಘ ಮಾಹಿತಿ ಒದಗಿಸಲಿದ್ದಾರೆ.

ಎರಡನೇ ಭಾಗದ ಬಜೆಟ್ ಭಾಷಣದಲ್ಲಿ ತತ್ಕ್ಷಣದ ಆರ್ಥಿಕ ಆದ್ಯತೆಗಳಿಗೆ ಒತ್ತು ಕೊಟ್ಟಂತೆ, ದೂರಗಾಮಿ ಅಭಿವೃದ್ಧಿ ಗುರಿಗಳಿಗೂ ಒತ್ತು ಕೊಡಲಾಗುತ್ತದೆ. ದೀರ್ಘಾವಧಿ ರಚನಾತ್ಮಕ ಸುಧಾರಣೆಗಳ ಮೂಲಕ ಸರ್ಕಾರ ಆರ್ಥಿಕ ಶಿಸ್ತು ಅಭಿವೃದ್ಧಿ, ಸಮಾಜ ಕಲ್ಯಾಣದ ಸಮತೋಲನ ಸಾಧಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ವಿವರ ಇದರಲ್ಲಿ ಇರುತ್ತದೆ ಎನ್ನಲಾಗಿದೆ.

ಜಾಗತಿಕ ಮತ್ತು ದೇಶೀಯ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ದೃಷ್ಟಿಕೋನ ಹೇಗಿರುತ್ತದೆ ಎಂಬುದರ ಚಿತ್ರಣವನ್ನು ತೆರೆದಿಡಲಾಗುತ್ತದೆ. ದೇಶದ ಸದ್ಯದ ಆರ್ಥಿಕ ಸಾಮರ್ಥ್ಯಗಳೇನು, ವಿವಿಧ ವಲಯವಾರು ಅನುಕೂಲಗಳೇನು, ಭವಿಷ್ಯದ ಬೆಳವಣಿಗೆ ಅವಕಾಶಗಳೆಷ್ಟು ಎಂಬಿತ್ಯಾದಿಯನ್ನು ಅಂದಾಜಿಸುವ ಪ್ರಯತ್ನವಾಗಲಿದೆ.

ಒಟ್ಟಾರೆ, ಬಜೆಟ್ ಭಾಷಣದ ದ್ವಿತೀಯಾರ್ಧದಲ್ಲಿ ಸರ್ಕಾರದ ಮಧ್ಯಮ ಮತ್ತು ದೂರಗಾಮಿ ಆರ್ಥಿಕ ಆದ್ಯತೆಗಳು ಹಾಗು ಸುಧಾರಣೆಗಳ ಝಲಕ್ ಹೇಗಿರುತ್ತೆ ಎಂಬುದರ ಸುಳಿವು ಕೊಡಲಾಗುತ್ತದೆ. ಇನ್ನುಳಿದಂತೆ ಹೊಸ ಯೋಜನೆಗಳ ಘೋಷಣೆ, ಬಂಡವಾಳ ವೆಚ್ಚ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ, ಯೋಜನೆಗಳಿಗೆ ಅನುದಾನ ಹಂಚಿಕೆ ಇತ್ಯಾದಿ ಮೂಲಭೂತ ಬಜೆಟ್ ಅಂಶಗಳು ಇದ್ದೇ ಇರುತ್ತವೆ.


Share with

Leave a Reply

Your email address will not be published. Required fields are marked *