ಮಣಿಪಾಲ: ವಿಶ್ವದ ಪ್ರತಿಷ್ಠಿತ ನೇಚರ್ ರಿಸರ್ಚ್ ಗ್ರೂಪ್‌ನ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇದೇ ಫೆ.26ರಿಂದ ಮಾ.1ರವರೆಗೆ ನ್ಯಾನೋ ತಂತ್ರಜ್ಞಾನದ ವಿವಿಧ ಸಂಶೋಧನೆಗೆ ಸಂಬಂಧಿಸಿದಂತೆ ಮೂರು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ.
ಮಣಿಪಾಲ ಮಾಹೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಾಹೆ ವಿವಿಯ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಅವರು, ಫೆ.26 ಮತ್ತು 27ರಂದು ಬಯೋಮೆಡಿಕಲ್ಸ್ ಅಪ್ಲಿಕೇಶನ್ಸ್‌ಗಳಲ್ಲಿ ನ್ಯಾನೋ ಮೆಟೀರಿಯಲ್ಸ್‌ಗಳ ಪಾತ್ರದ ಕುರಿತು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ನೋಬೆಲ್ ಪ್ರಶಸ್ತಿಗೆ ಸೂಚಿತರಾದ ವಿಜ್ಞಾನಿಗಳೂ ಸೇರಿದಂತೆ ವಿಶ್ವದ ಪ್ರಸಿದ್ಧ, ಖ್ಯಾತ ಸಂಶೋಧಕರು ಸೇರಿ 60ಕ್ಕೂ ಅಧಿಕ ಮಂದಿ ವಿಶೇಷಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿ ನ್ಯಾನೋತಂತ್ರಜ್ಞಾನ ಹಾಗೂ ಅದರ ಬಯೋಮೆಡಿಕಲ್ ಅಪ್ಲಿಕೇಶನ್ಸ್‌ಗಳಲ್ಲಿ ಆಗಿರುವ ಆಧುನಿಕ ಪ್ರಗತಿಯ ಕುರಿತು ಚರ್ಚಿಸಲಿದ್ದಾರೆ. ಎರಡು ದಿನಗಳ ಈ ಸಮ್ಮೇಳನ ಮಣಿಪಾಲದ ಫಾರ್ಚ್ಯೂನ್ ಇನ್ ಲ್ಯಾಲಿ ವ್ಯೆ ಹೊಟೇಲ್‌ನ ಚೈತ್ಯ ಹಾಲ್‌ನಲ್ಲಿ ನಡೆಯಲಿದೆ ಎಂದರು.
ಫೆ.28ರಂದು ವಿಶ್ವದ ಶ್ರೇಷ್ಠ ಮ್ಯಾಗಝೀನ್‌ಗಳ ಸಾಲಿಗೆ ಸೇರುವ ‘ನೇಚರ್’ ನಿಯತಕಾಲಿಕವನ್ನು ಪ್ರಕಟಿಸುವ ನೇಚರ್ ಗ್ರೂಪ್‌ನಿಂದ ನೇಚರ್ ಮಾಸ್ಟರ್‌ಕ್ಲಾಸ್ ಕಾರ್ಯಾಗಾರ ನಡೆಯಲಿದೆ. ಫೆ.29ರಿಂದ ಮಾ.1ರವರೆಗೆ ಮಾಹೆ ಕೆಎಂಸಿಯ ಡಾ.ಟಿಎಂಎ ಪೈ ಹಾಲ್ ನಲ್ಲಿ ‘ನ್ಯಾನೋ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನ’ದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ದೇಶ-ವಿದೇಶಗಳ 300ಕ್ಕೂ ಅಧಿಕ ವಿಷಯ ತಜ್ಞರು, ಸಂಶೋಧಕರು ಇದರಲ್ಲಿ ಪಾಲ್ಗೊಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಾಹೆಯ ಸಹಕುಲಪತಿ ಡಾ.ಶರತ್ ಕುಮಾರ್ ಕೆ., ಸಹಕುಲಪತಿ ಡಾ.ನಾರಾಯಣ ಸಭಾಹಿತ್, ಸಹಕುಲಪತಿ ಡಾ.ಎನ್.ಎನ್.ಶರ್ಮ, ಡಾ.ಸತೀಶ್ ರಾವ್ ಉಪಸ್ಥಿತರಿದ್ದರು.