ಇಂಫಾಲ್: ಮಣಿಪುರದ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಹಾಗೂ ರಾಜ್ಯ ಸರಕಾರದ ಭದ್ರತಾ ಸಲಹೆಗಾರರ ಪದಚ್ಯುತಗೊಳಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ನಡೆಸಿ ಭದ್ರತಾ ಪಡೆಗಳೊಂದಿಗೆ ಮಂಗಳವಾರ ನಡೆದ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಮಣಿಪುರ ಸರ್ಕಾರ ಐದು ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತ ಹಾಗೂ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ತೌಬಲ್‌ನಲ್ಲಿ ನಿಷೇಧಾಜ್ಞೆಗಳ ವಿಧಿಸಿದೆ.
ಮಂಗಳವಾರ ಬೆಳಗ್ಗೆ ಪ್ರತಿಭಟನಾಕಾರರು ರಾಜಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರತಿಭಟನಾಕಾರರು ಅವರೊಂದಿಗೆ ಘರ್ಷಣೆ ನಡೆಸಿದ್ದರಿಂದ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳ ಸಿಡಿಸಿದರು. ಸೋಮವಾರದಿಂದ ಖ್ವೈರಾಂಬಂಡ್ ಮಹಿಳಾ ಮಾರುಕಟ್ಟೆಯಲ್ಲಿ ಮೊಕ್ಕಾಂ ಹೂಡಿರುವ ನೂರಾರು ವಿದ್ಯಾರ್ಥಿಗಳು ಬಿಟಿ ರಸ್ತೆಯ ಮೂಲಕ ರಾಜಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದರಾದರೂ ಕಾಂಗ್ರೆಸ್ ಭವನದ ಬಳಿ ಭದ್ರತಾ ಪಡೆಗಳು ತಡೆದರು.
ದ್ವೇಷದ ಚಿತ್ರಗಳು, ಭಾಷಣ ಮತ್ತು ವಿಡಿಯೋಗಳ ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮಗಳ ಬಳಕೆ ತಡೆಯಲು ಗೃಹ ಇಲಾಖೆಯು ಇಂಟರ್ನೆಟ್ ಅನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ. ಸೆ.15 ರಂದು ನಿಷೇಧ ತೆಗೆದುಹಾಕುವ ಸಾಧ್ಯತೆಯಿದೆ. ಆರೋಗ್ಯ, ಇಂಜಿನಿಯರಿಂಗ್ ವಿಭಾಗ, ಮುನ್ಸಿಪಲ್ ಸಂಸ್ಥೆಗಳು, ವಿದ್ಯುತ್ , ಪೆಟ್ರೋಲ್ ಪಂಪ್‌ಗಳು, ನ್ಯಾಯಾಲಯಗಳ ಕಾರ್ಯನಿರ್ವಹಣೆ, ವಿಮಾನ ಪ್ರಯಾಣಿಕರು ಮತ್ತು ಮಾಧ್ಯಮಗಳ ಓಡಾಟ, ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವವರ ಮುಕ್ತ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ.