ಉಜ್ಜಯಿನಿ: ಮುಂದಿನ ಮಾರ್ಚ್‌ನಲ್ಲಿ ನಡೆಯುವ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಆಟಗಾರನ್ನು ಆಡಿಸಿದರೆ ಮೈದಾನಕ್ಕೆ ನುಗ್ಗಿ ಪಿಚ್‌ಗಳನ್ನು ಹಾಳುಗೆಡವುವ ಮೂಲಕ ಪಂದ್ಯಾವಳಿಗೆ ತಡೆಯೊಡ್ಡುತ್ತೇವೆ ಎಂದು ಹಿಂದೂ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ರಿನುಕೇಶ್ವರ್ ಮಹಾದೇವ್ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಮಹಾವೀರ್‌ನಾಥ್, ಐಪಿಎಲ್‌ನಲ್ಲಿ ಬಾಂಗ್ಲಾ ಆಟಗಾರರು ಒಂದು ವೇಳೆ ಆಡಿದರೆ ನಮ್ಮ ಬೆಂಬಲಿಗರು ಮೈದಾನಕ್ಕೆ ನುಗ್ಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಬಿಸಿಸಿಐ ಅಧಿಕಾರಿಗಳು ನಿರ್ಲಕ್ಷ್ಯಸುತ್ತಿದ್ದಾರೆ. ಬಾಂಗ್ಲಾ ಆಟಗಾರರನ್ನು ಐಪಿಎಲ್ ನಲ್ಲಿ ಆಡಿಸಲು ಮುಂದಾಗಿದ್ದಾರೆ ಎಂದು ಮಹಾವೀರ್‌ನಾಥ್ ಜತೆ ಕೆಲವು ಮಠಾದೀಶರು, ಹಿಂದೂ ಸಂಘಟನೆಗಳು ಆರೋಪಿಸಿವೆ.
ಮುಸ್ತಾಫಿಜುರ್ ಖರೀದಿಸಿರುವ ಕೋಲ್ಕತಾ ತಂಡದ ವಿರುದ್ಧ ಗರಂ
ಅಬುಧಾಬಿಯಲ್ಲಿ ಇದೇ ಡಿ.16ರಂದು ನಡೆದ ಐಪಿಎಲ್ ಆಟಗಾರರ ಹರಾಜಿನ ವೇಳೆ ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರಹ್ಮಾನ್ ಅವರನ್ನು 9.20 ಕೋಟಿ ರೂ.ಗೆ ಕೋಲ್ಕತಾ ತಂಡ ಖರೀದಿಸಿತ್ತು. ಈ ವೇಳೆ ಹರಾಜಾದ ಬಾಂಗ್ಲಾದ ಏಕಮಾತ್ರ ಆಟಗಾರ ಇವರು. ಹೀಗಾಗಿ ಕೆಕೆಆರ್ ವಿರುದ್ಧವೂ ಹಿಂದೂ ಸಂಘಟನೆಗಳು ಆಕ್ರೋಶ ತೋರಿಕೊಂಡಿವೆ. ಜಾಲತಾಣದಲ್ಲಿ ಕೆಕೆಆರ್‌ತಂಡವನ್ನು ನಿಷೇಧಿಸಿ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿವೆ.




