
ನವದೆಹಲಿ, ಮೇ 15: ಟ್ಯಾರಿಫ್ ಆಯ್ತು, ಈಗ ಅಮೆರಿಕದ ಅಧ್ಯಕ್ಷರ ಕಣ್ಣು ಆ್ಯಪಲ್ ಕಂಪನಿ ಮೇಲೆ ನೆಟ್ಟಿದೆ. ಭಾರತದಲ್ಲಿ ಐಫೋನ್ಗಳನ್ನು ತಯಾರಿಸುತ್ತಿರುವುದು ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕೆಂಗಣ್ಣು ತಂದಿದೆ. ಚೀನಾದಿಂದ ಈಗಷ್ಟೇ ಭಾರತದಲ್ಲಿ ಉತ್ಪಾದನೆಯ ವಿಸ್ತರಿಸಿರುವ ಆ್ಯಪಲ್ ಕಂಪನಿ ಮೇಲೆ ಟ್ರಂಪ್ ಒತ್ತಡ ಹೇರುತ್ತಿದ್ಧಾರೆ. ಭಾರತದಲ್ಲಿ ನೀವು ಫ್ಯಾಕ್ಟರಿ ಕಟ್ಟೋದನ್ನು ನಿಲ್ಲಿಸಿ ಎಂದು ತಾನು ಸಿಇಒ ಟಿಮ್ ಕುಕ್ಗೆ ತಿಳಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಉತ್ಪಾದನೆ ಹೆಚ್ಚಿಸುವಂತೆ ಅವರು ಆ್ಯಪಲ್ಗೆ ಹೇಳಿದ್ದಾರಂತೆ.
ನಿನ್ನೆ ಟಿಮ್ ಕುಕ್ ಜೊತೆ ಸ್ವಲ್ಪ ಮಾತುಕತೆಯಾಯಿತು. ಅವರು ಭಾರತದೆಲ್ಲೆಡೆ ನಿರ್ಮಿಸುತ್ತಿದ್ದಾರೆ. ಭಾರತದಲ್ಲಿ ನೀವು ಕಟ್ಟೋದು ಬೇಡ. ಭಾರತೀಯರು ತಮ್ಮ ಯೋಗಕ್ಷೇಮ ತಾವೇ ನೋಡಿಕೊಳ್ಳುತ್ತಾರೆ. ಅವರನ್ನು ಬಿಟ್ಟು ಬನ್ನಿ ಅಂತ ಅವರಿಗೆ ಹೇಳಿದೆ. ಈ ಮಾತುಕತೆಯ ಪರಿಣಾಮವಾಗಿ, ಆ್ಯಪಲ್ ಕಂಪನಿ ಅಮೆರಿಕದಲ್ಲಿ ತಯಾರಿಕೆ ಹೆಚ್ಚಿಸಲಿದೆ’ ಎಂದು ಅಮೆರಿಕ ಅಧ್ಯಕ್ಷರು ವಿವರಿಸಿದ್ದಾರೆ.
ಆ್ಯಪಲ್ ಕಂಪನಿಗೆ ಇಬ್ಬಂದಿ ಸಂಕಟ ಶುರು
ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಮಾಡಿದರೆ ಅಧಿಕ ಸಂಬಳ ಇತ್ಯಾದಿ ಕಾರಣದಿಂದ ತಯಾರಿಕಾ ವೆಚ್ಚ ಅಧಿಕವಾಗಿರುತ್ತದೆ. ಈ ಕಾರಣಕ್ಕೆ ಸಕಲ ಉತ್ಪಾದನಾ ಪರಿಸರ ಹಾಗೂ ಪರಿಣಿತ ಮಾನವ ಸಂಪನ್ಮೂಲ ಇರುವ ಚೀನಾದಲ್ಲಿ ಆ್ಯಪಲ್ನ ಎಲ್ಲಾ ಉತ್ಪನ್ನಗಳ ತಯಾರಿಕೆ ಆಗುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಚೀನಾದಿಂದಾಗಿ ಜಾಗತಿಕ ಸರಬರಾಜು ಸರಪಳಿ ದುರ್ಬಲಗೊಂಡಿದ್ದರಿಂದ ತಯಾರಿಕೆಯನ್ನು ಚೀನಾ ಆಚೆಗೂ ವಿಸ್ತರಿಸಲು ನಿರ್ಧರಿಸಿದ ಕಂಪನಿಗಳಲ್ಲಿ ಆ್ಯಪಲ್ ಕೂಡ ಒಂದು.
ಎರಡೇ ವರ್ಷದ ಅಂತರದಲ್ಲಿ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಶೇ. 20ಕ್ಕೆ ಹೆಚ್ಚಿಸಿದೆ. ಅಂದರೆ, ಶೇ. 20ರಷ್ಟು ಐಫೋನ್ಗಳು ಭಾರತದಲ್ಲೇ ತಯಾರಾಗುತ್ತಿವೆ. ಇನ್ನೆರಡು ವರ್ಷದಲ್ಲಿ ಇದನ್ನು ಶೇ. 30ಕ್ಕೆ ಹೆಚ್ಚಿಸುವ ಉದ್ದೇಶ ಆ್ಯಪಲ್ನದ್ದು.