ಟೆಹ್ರಾನ್: ಇರಾನ್ ಜತೆಗಿನ ಯುದ್ಧವನ್ನು ಶೀಘ್ರವೇ ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸೇನಾ ದಾಳಿಯನ್ನು ಯಾವಾಗ ನಿಲ್ಲಿಸಬೇಕು ಎಂಬುದನ್ನು “ನಿರ್ಧರಿಸುವವರು” ನಾವು ಎಂದು ಹೇಳಿದೆ.

ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಈ ದಾಳಿಯ ಮುಂದುವರಿಕೆ ಮತ್ತು ಭವಿಷ್ಯದ ಸ್ಥಿತಿ ಈಗ ಟೆಹ್ರಾನ್ ಪಡೆಗಳ ಕೈಯಲ್ಲಿದೆ ಎಂದು ಇರಾನ್ ತಿಳಿಸಿದೆ.
“ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ನಿರ್ಧರಿಸುವವರು ನಾವೇ” ಎಂದು ಐಆರ್ಜಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಮೇರಿಕನ್ ಪಡೆಗಳು ಯುದ್ಧವನ್ನು ಕೊನೆಗೊಳಿಸುವುದಿಲ್ಲ” ಎಂದು ಹೇಳುವ ಮೂಲಕ ಇರಾನ್ ಯುದ್ಧವನ್ನು ಇನ್ನಷ್ಟು ಕಾಲ ಮುಂದುವರಿಸುವ ಸುಳಿವು ನೀಡಿದೆ.
ಇರಾನ್ ವಿರುದ್ಧದ ಯುದ್ಧ ಅಲ್ಪಕಾಲಿಕವಾಗಿರಬಹುದು ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ ನೂತನ ಕಟ್ಟರ್ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಿದ ಇಸ್ಲಾಮಿಕ್ ಗಣರಾಜ್ಯದಿಂದ ಜಾಗತಿಕ ತೈಲ ಪೂರೈಕೆಯಲ್ಲಿ ಅಡ್ಡಿ ಉಂಟಾದರೆ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಕುರಿತು ಪರೋಕ್ಷವಾಗಿ ಸಂದೇಶ ರವಾನಿಸಿದ್ದರು.
ಒಂದು ವೇಳೆ “ಇರಾನ್ ಹಾರ್ಮುಜ್ ಜಲಸಂಧಿಯೊಳಗೆ ತೈಲ ಹಡಗು ಸಂಚಾರ ತಡೆಯುವ ಕೆಲಸ ಮಾಡಿದರೆ, ಇರಾನ್ ಮೇಲೆ ಈವರೆಗೆ ನಡೆಸಿದ ದಾಳಿಗಿಂತ ಇಪ್ಪತ್ತು ಪಟ್ಟು ಹೆಚ್ಚು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಕಮಾಂಡರ್-ಇನ್-ಚೀಫ್ ಸಾಮಾಜಿಕ ಜಾಲತಾಣದಲ್ಲಿ ಕಟು ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.




