ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ

Share with

ನವದೆಹಲಿ, ಡಿಸೆಂಬರ್ 5: ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇರಿಸುತ್ತಿದೆ. ಬಹಳ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಕನಸು ಸಾಕಾರಗೊಳ್ಳಲು ಇದು ಎಡೆ ಮಾಡಿಕೊಡಲಿದೆ. ಭಾರತೀಯ ಅಂತರಿಕ್ಷ ನಿಲ್ದಾಣದ (Bharatiya Antariksh Station) ರೂಪುರೇಖೆ ಅಥವಾ ಸ್ವರೂಪವನ್ನು ಇಸ್ರೋ ಸಂಸ್ಥೆ (ISRO) ಸಿದ್ಧಪಡಿಸಿದೆ. ಇದು ಭಾರತದ ಮೊದಲ ಸ್ಪೇಸ್ ಸ್ಟೇಷನ್ ಅಥವಾ ಬಾಹ್ಯಾಕಾಶ ನಿಲ್ದಾಣ (Space Station) ಎನಿಸಲಿದೆ.

ಅಂತರಿಕ್ಷ ನಿಲ್ದಾಣಕ್ಕೆ ಇಸ್ರೋ ಸಿದ್ಧಪಡಿಸಿರುವ ರೂಪುರೇಖೆಯನ್ನು ರಾಷ್ಟ್ರಮಟ್ಟದ ಪರಾಮರ್ಶ ಸಮಿತಿ ಪರಿಶೀಲನೆ ನಡೆಸಿ ಒಪ್ಪಿಗೆ ಕೊಟ್ಟಿದೆ. ಕೇಂದ್ರ ವಿಜ್ಞಾನ ಹಾಗು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಈ ಮಾಹಿತಿಯನ್ನು ಇತ್ತೀಚೆಗೆ ಲೋಕಸಭೆಗೆ ಹಂಚಿಕೊಂಡಿದ್ದಾರೆ.

ಭಾರತೀಯ ಅಂತರಿಕ್ಷ ನಿಲ್ದಾಣದಲ್ಲಿ ಐದು ಮಾಡ್ಯೂಲ್ಗಳಿರುವಂತೆ ಯೋಜಿಸಲಾಗಿದೆ. ಈ ಎಲ್ಲಾ ಐದು ಮಾಡ್ಯೂಲ್ಗಳಿರುವ ನಿಲ್ದಾಣವು 2035ರಲ್ಲಿ ಕಾರ್ಯಾಚರಿಸಲಾಗುವಂತೆ ಮಾಡುವ ಗುರಿ ಇದೆ. 2024ರ ಸೆಪ್ಟೆಂಬರ್ನಲ್ಲಿ ಬಿಎಎಸ್-01 ಎನ್ನುವ ಮೊದಲ ಮಾಡ್ಯೂಲ್ನ ಅಭಿವೃದ್ಧಿಗೆ ಸರ್ಕಾರ ಚಾಲನೆ ಕೊಟ್ಟಿತ್ತು. ಇದು ಮೂಲ ಮಾಡ್ಯೂಲ್ ಎಂದೇ ಪರಿಗಣಿತವಾಗಿದ್ದು 2028ಕ್ಕೆ ಮುಗಿಯಬಹುದು. ಈಗಾಗಲೇ ಮಾಡ್ಯೂಲ್ನ ಟೆಕ್ನಾಲಜಿ ಸಬ್ಸಿಸ್ಟಂಗಳು, ಕಾಂಪೊನೆಂಟ್ಗಳಿಗೆ ಎಂಜಿನಿಯರಿಂಗ್ ಕೆಲಸಗಳು ನಡೆಯುತ್ತಿವೆ.

ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಿಸ್ಟಂಗಳಿಗೆ ತಾಳೆಯಾಗಬೇಕು…
ಭಾರತೀಯ ಅಂತರಿಕ್ಷ ನಿಲ್ದಾಣದ ಮಾಡ್ಯೂಲ್ಗಳನ್ನು ಇತರ ಅಂತಾರಾಷ್ಟ್ರೀಯ ಸ್ಪೇಸ್ ಏಜೆನ್ಸಿಗಳ ಸ್ಪೇಸ್ಕ್ರಾಫ್ಟ್ಗಳು ಬಳಸಲು ಸಾಧ್ಯವಾಗುವ ರೀತಿಯಲ್ಲಿ, ಇಂಟರಾಪರಾಬಿಲಿಟಿ ಸಾಧ್ಯವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಅಂತರಿಕ್ಷ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್ಗಳು ನಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಭಾರತ ಮಾತ್ರವೇ ಈ ನಿಲ್ದಾಣಕ್ಕೆ ಹೋಗಿ ಬಂದು ಮಾಡಬೇಕಾಗುತ್ತದೆ.

ಬೇರೆ ಸ್ಪೇಸ್ ಸ್ಟೇಷನ್ಗಳು ಎಷ್ಟಿವೆ?
ಸದ್ಯ ಚಾಲನೆಯಲ್ಲಿರುವ ಸ್ಪೇಸ್ ಸ್ಟೇಷನ್ಗಳು ಎರಡೇ. ಒಂದು, ಅಮೆರಿಕದ ಐಎಸ್ಎಸ್ ಅಥವಾ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್. ಇನ್ನೊಂದು ಚೀನಾದ ಟಿಯಾಂಗೋಂಗ್ ಸ್ಪೇಸ್ ಸ್ಟೇಷನ್. ಇವೆರಡು ಕೂಡ ಭೂಮಿಯಿಂದ ಸುಮಾರು 350ರಿಂದ 450 ಕಿಮೀ ದೂರದಲ್ಲಿ ಒಂದು ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ.

ವಿಶ್ವದ ಮೊದಲ ಸ್ಪೇಸ್ ಸ್ಟೇಷನ್ ಅನ್ನು ರಷ್ಯಾ 1971ರಲ್ಲೇ ನಿರ್ಮಿಸಿದೆ. ಇಲ್ಲಿಯವರೆಗೆ 10ಕ್ಕೂ ಹೆಚ್ಚು ಸ್ಪೇಸ್ ಸ್ಟೇಷನ್ಗಳು ನಿರ್ಮಾಣವಾಗಿವೆ. ಈಗ ಚಾಲನೆಯಲ್ಲಿರುವುದು ಮೇಲೆ ತಿಳಿಸಿದ ಎರಡು ಮಾತ್ರವೇ. ಉಳಿದವು ಈಗ ಇಲ್ಲ.

ರಷ್ಯಾ, ಅಮೆರಿಕ, ಚೀನಾ, ಯೂರೋಪ್, ಕೆನಡಾ ಮತ್ತು ಜಪಾನ್ ದೇಶಗಳು ಮಾತ್ರ ಸ್ಪೇಸ್ ಸ್ಟೇಷನ್ ನಿರ್ಮಾಣ ತಂತ್ರಜ್ಞಾನ ತಿಳಿದಿರುವುದು. ಆದರೆ, ಸ್ವಂತವಾಗಿ ಮತ್ತು ಏಕಾಂಗಿಯಾಗಿ ಸ್ಪೇಸ್ ಸ್ಟೇಷನ್ ನಿರ್ಮಿಸುವ ಸಾಮರ್ಥ್ಯ ರಷ್ಯಾ, ಚೀನಾ ಮತ್ತು ಅಮೆರಿಕಕ್ಕೆ ಮಾತ್ರ ಇರುವುದು. ಈ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತದೆ.


Share with

Leave a Reply

Your email address will not be published. Required fields are marked *