ಹೊಸದಿಲ್ಲಿ: ಶ್ರೀಲಂಕಾ ಪ್ರವಾಸದ ವೇಳೆ ನಡೆಯುವ ಮೂರು ಪಂದ್ಯಗಳ ಸರಣಿಗೆ ಭಾರತೀಯ ಟಿ20 ಮತ್ತು ಏಕದಿನ ತಂಡಗಳನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದೆ. 15 ಮಂದಿಯ ಭಾರತೀಯ ಟಿ20 ತಂಡಕ್ಕೆ ಶಕ್ತಿಶಾಲಿ ಹೊಡೆತಗಳ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಏಕದಿನ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಅರ್ಚಕರಿಂದ ಪ್ರಾರ್ಥನೆ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಜತೆಗೂಡಿ ಜು. 8ರಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ದೇವಸ್ಥಾನದ ಅರ್ಚಕರು ಸೂರ್ಯ ಅವರಿಗೆ ನಾಯಕರಾಗುವ ಭಾಗ್ಯ ದೊರಕಲಿ ಎಂದು ಹಾರೈಸಿ ಪ್ರಸಾದ ನೀಡಿದ್ದರು. ಅದರಂತೆಯೇ 10 ದಿನಗಳ ಒಳಗೆ ನಾಯಕರಾಗಿ ಘೋಷಣೆ ಮಾಡಲಾಗಿದೆ.
ಶ್ರೀಲಂಕಾ ಪ್ರವಾಸದ ವೇಳೆ ಟಿ20 ನಾಯಕತ್ವ ವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗು ತ್ತದೆ ಎಂದು ಆರಂಭದಲ್ಲಿ ವರದಿಗಳಾಗಿದ್ದವು. ಆದರೆ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಸೂರ್ಯ ಕುಮಾರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.