ನವದೆಹಲಿ: ಒಂದು ಕಾಲದಲ್ಲಿ ಸೈಕಲ್‌ನಲ್ಲಿ ತಾಯತಗಳನ್ನು ಮಾರಾಟ ಮಾಡುತ್ತಿದ್ದ, ಧಾರ್ಮಿಕ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಜಮಾಲುದ್ದೀನ್ ಬಳಿ ಈಗ ಬರೋಬ್ಬರಿ 106 ಕೋಟಿ ಆಸ್ತಿ ಪತ್ತೆಯಾಗಿದೆ.
ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಸೈಕಲ್ ಹೊಡೆಯುತ್ತಾ ತಾಯತಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ನಂತರ ಧಾರ್ಮಿಕ ಮತಾಂತರ ಕೆಲಸಕ್ಕೆ ಇಳಿದ. ಈಗ ಆತನ ಬಳಿ 40 ಬ್ಯಾಂಕ್ ಖಾತೆಗಳಿದ್ದು, ಕೋಟ್ಯಂತರ ಹಣ ಹೊಂದಿದ್ದಾನೆ.
ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಮತಾಂತರ ದಂಧೆಗೆ ಸಂಬಂಧಿಸಿದಂತೆ ಛಂಗೂರ್ ಬಾಬಾ ಮತ್ತು ಆತನ ಆಪ್ತ ಸಹಚರ ನೀತು ಅಲಿಯಾಸ್ ನಸ್ರೀನ್ ಎಂಬವನನ್ನು ಶನಿವಾರ ಲಕ್ನೋದ ಹೋಟೆಲ್ ಒಂದರಿಂದ ಬಂಧಿಸಲಾಯಿತು. ಅಂದಿನಿಂದ, ಜಮಾಲುದ್ದೀನ್ ಸುತ್ತ ಕುಣಿಕೆ ಬಿಗಿಯಾಗುತ್ತಿದೆ.
ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗಗಳು ಮತ್ತು ವಿಧವೆ ಮಹಿಳೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ವಿವಾಹದ ಭರವಸೆ ಅಥವಾ ಬೆದರಿಕೆಯ ಮೂಲಕ ಬಲವಂತವಾಗಿ ಆಮಿಷವೊಡ್ಡಿರುವುದು ಬೆಳಕಿಗೆ ಬಂದಿದೆ. ಇದು ಧಾರ್ಮಿಕ ಮತಾಂತರಕ್ಕೆ ಸ್ಥಾಪಿತ ಕಾರ್ಯವಿಧಾನಗಳನ್ನು ಉಲ್ಲಂಘಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗ್ಯಾಂಗ್‌ಗೆ ಭಯೋತ್ಪಾದಕ ಸಂಬಂಧವಿದೆಯೇ ಎಂದು ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ತನಿಖೆ ನಡೆಸುತ್ತಿದೆ. ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕೂಡ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಬಲರಾಂಪುರದಲ್ಲಿ ಈ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ವ್ಯಕ್ತಿಗಳ ಬಗ್ಗೆಯೂ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.