ಗುರುವಾಯೂರು ದೇವಾಲಯದ ಕೊಳದಲ್ಲಿ ಕಾಲು ತೊಳೆದ ಜಾಸ್ಮಿನ್ ಜಾಫರ್..! ಭುಗಿಲೆದ್ದ ಆಕ್ರೋಶ.. ದೇವಸ್ಥಾನ ಶುದ್ಧೀಕರಣ

Share with

ತಿರುವನಂತಪುರ: ಮುಸ್ಲಿಂ ಮಹಿಳೆಯೊಬ್ಬರು ಪ್ರವೇಶಿಸಿದ್ದಕ್ಕೆ ಕೇರಳದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಗುರವಾಯೂರು ಶ್ರೀ ಕೃಷ್ಣ ದೇಗುಲದ ಕೊಳದಲ್ಲಿ ಮಂಗಳವಾರ ‘ಶುದ್ದೀಕರಣ’ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಜಾಸ್ಮಿನ್ ಜಾಫ‌ರ್ ದೇವಸ್ಥಾನದ ಕೊಳದಲ್ಲಿ ತಮ್ಮ ಪಾದಗಳನ್ನು ತೊಳೆಯುತ್ತಿರುವ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅವರು ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಶುದ್ದೀಕರಣ ಕಾರ್ಯದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಹಿಂದೂಯೇತರ ಮಹಿಳೆಯೊಬ್ಬರು ಕೊಳದ ಆವರಣ ಪ್ರವೇಶಿಸಿ ವಿಡಿಯೋ ಮಾಡಿ ದೇವಾಲಯದ ಸಂಪ್ರದಾಯಗಳನ್ನು ಮುರಿದಿದ್ದಾರೆ.

ಹೀಗಾಗಿ ಆಗಸ್ಟ್ 26 ರಂದು ಶುದ್ದೀಕರಣ ಕಾರ್ಯ ನಡೆಸಲಾಗುವುದು. ಅಂದು ಬೆಳಿಗ್ಗೆ 5 ರಿಂದ ಮಧ್ಯಾಹ್ನದವರೆಗೂ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ದೇವಾಲಯದ ಆವರಣದಲ್ಲಿ ರೀಲ್ಸ್ ಮಾಡುವುದಕ್ಕೆ ನಿರ್ಬಂಧವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾಯಾಲಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *