ಜೆರೋಸಾ ಶಾಲಾ ವಿವಾದ: ಶಾಸಕ ವೇದವ್ಯಾಸ್ ಕಾಮತ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು..!

Share with

ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ನಡೆದ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಇಬ್ಬರು ಪಾಲಿಕೆ ಸದಸ್ಯರುಗಳು ಮತ್ತು ಇತರರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲೆಯ ಶಿಕ್ಷಕಿ‌ಯೋರ್ವರು ಹಿಂದೂ ಧರ್ಮ ಮತ್ತು ದೇವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಶಾಲೆಯ ವಿದ್ಯಾರ್ಥಿಗಳ ಹೆತ್ತವರು ಎನ್ನಲಾದ ಕೆಲವು ಮಂದಿ ಸಂಘ ಪರಿವಾರದ ಕಾರ್ಯಕರ್ತರ ಜೊತೆಗೂಡಿ ಶಾಲೆಯ ಬಳಿ ಅಶಾಂತಿಯ ವಾತಾವರಣ ಸೃಷ್ಟಿಸಿದ್ದರು ಎಂದು ಹೇಳಲಾಗಿತ್ತು. ಫೆ.12ರಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ|ಭರತ್ ಶೆಟ್ಟಿ ಶಾಲೆಯ‌‌ ಮುಂದೆ ಜಮಾಯಿಸಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರನ್ನು ಶಾಲೆಯ ವಿರುದ್ಧ ಎತ್ತಿಕಟ್ಟುವಂತಹ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಇದೀಗ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಭರತ್ ಕುಮಾರ್, ವಿಹೆಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರು ಶಾಲೆಯ ವಿದ್ಯಾರ್ಥಿಗಳಿಂದಲೇ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತನಾಡಿ, ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿರುತ್ತಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಡುವೆ ಗಲಭೆ ಉಂಟಾಗುವಂತೆ ಪ್ರಚೋದಿಸಿದ್ದಾರೆ. ಜೊತೆಗೆ ಜಿಲ್ಲೆಯ ಕೋಮುಸೂಕ್ಷ್ಮತೆಗೆ ಭಂಗ ತರಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Share with

Leave a Reply

Your email address will not be published. Required fields are marked *