ಕಾನೂನು ಸುವ್ಯವಸ್ಥೆ ಕಾಪಾಡಲು ದ.ಕ – ಕಾಸರಗೋಡು ಜಿಲ್ಲಾ ಅಧಿಕಾರಿಗಳ ಜಂಟಿ ಸಭೆ

Share with

ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯ ಉನ್ನತ ಅಧಿಕಾರಿಗಳು ಮತ್ತು ಕಾಸರಗೋಡು ಜಿಲ್ಲೆಯ ಎಸ್‌ಪಿ ನೇತೃತ್ವದಲ್ಲಿ ಅಧಿಕಾರಿಗಳ ಜಂಟಿ ಸಭೆ ಸೋಮವಾರ ನಗರ ಪೊಲೀಸ್ ಕಮಿಷನ‌ರ್ ಕಚೇರಿಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಪ್ರಭಾರ ಜಿಲ್ಲಾಧಿಕಾರಿ ಡಾ| ಆನಂದ್ ಕೆ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್‌ ಕೆ., ಕಾಸರಗೋಡು ಎಸ್‌ಪಿ ವಿಜಯ್ ಭರತ್ ರೆಡ್ಡಿ, ಕಾನೂನು ಸುವ್ಯವಸ್ಥೆ ವಿಭಾಗ ಉಪಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯೆಲ್ ಸಭೆಯಲ್ಲಿ ಭಾಗವಹಿಸಿದ್ದರು.

ಎರಡೂ ಜಿಲ್ಲೆಗಳ ವಿವಿಧ ಅಪರಾಧ ಕೃತ್ಯಗಳನ್ನು ತಡೆಯಲು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚೆ ನಡೆಸ ಲಾಯಿತು. ಮುಖ್ಯವಾಗಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಕರಣಗಳಲ್ಲಿ ಶಂಕಿತ ಆರೋಪಿಗಳು ಮತ್ತು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಯ ಕಾರ್ಯಾಚರಣೆಗೆ ಉಭಯ ಜಿಲ್ಲೆಗಳ ಪೊಲೀಸರು ಪರಸ್ಪರ ಸಹಕರಿಸುವ ಬಗ್ಗೆ ಚರ್ಚಿಸಿದರು. ಗಡಿ ಜಿಲ್ಲೆಯ ಎರಡೂ ಕಡೆಗಳಲ್ಲಿ ಕೋಮು ಗಲಭೆಕೋರರ ಬಗ್ಗೆ ಮಾಹಿತಿ ವಿನಿಮಯಕ್ಕೆ ನಿರ್ಧರಿಸಲಾಯಿತು. ಕೋಮು ಉದ್ವಿಗ್ನತೆಯನ್ನು ಯಾವ ರೀತಿಯಲ್ಲಿ ತಿಳಿಗೊಳಿಸಬಹುದು ಹಾಗೂ ಅಂತಾರಾಜ್ಯ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ
ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಜಿಲ್ಲೆಯ ಗಡಿ ಭಾಗಗಳಲ್ಲಿ ನಡೆಯುವ ದನಗಳ ಅಕ್ರಮ ಸಾಗಣೆ, ಮರಳು ಅಕ್ರಮ ಸಾಗಣೆ ತಪ್ಪಿಸಲು ಜಂಟಿ ಮೇಲ್ವಿಚಾರಣೆ ಮತ್ತು ದಾಳಿ ನಡೆಸಲು ಅಧಿಕಾರಿಗಳು ತೀರ್ಮಾನಿಸಿದರು. ಮಂಗಳೂರು ನಗರದಲ್ಲಿ ಓದುತ್ತಿರುವ ಕೇರಳ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.


Share with

Leave a Reply

Your email address will not be published. Required fields are marked *