ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿಗೆ ಪತ್ರಕರ್ತ ರವಿ ನಾಯ್ಕಾಪು ಆಯ್ಕೆ

Share with

ಬೆಂಗಳೂರು : ಬೆಂಗಳೂರು ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆಯು ಕೊಡಮಾಡುವ ಪ್ರತಿಷ್ಠಿತ “ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿ”ಗೆ ಕಾಸರಗೋಡಿನ ಪತ್ರಕರ್ತ, ಲೇಖಕ, ಸಂಘಟಕ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ.

ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟಗಳ ನೇತೃತ್ವದಲ್ಲಿ ಈ ತಿಂಗಳ 27 ರಂದು ಬೆಂಗಳೂರಿನ ಗೆಜ್ಜೆನಾದ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಂಸ್ಕೃತಿ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆಯೆಂದು ವೇದಿಕೆಯು ಪತ್ರಿಕಾ ಹೇಳಿಕೆಯಲ್ಲಿ ಘೋಷಿಸಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಕಳೆದ 25 ವರ್ಷಗಳಿಂದ ಕಾಸರಗೋಡಿನಲ್ಲಿ ಪತ್ರಿಕಾ ರಂಗದಲ್ಲಿ ಸಕ್ರಿಯರಾಗಿರುವ ರವಿ ನಾಯ್ಕಾಪು ಅವರ ಸಾಹಿತ್ಯ ವಲಯದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಎಂಬೀ ಕೃತಿಗಳನ್ನು ರಚಿಸಿರುವ ರವಿ ಅವರ “ಸ್ನೇಹಗಂಗೆ” ಕೃತಿಯ ಸಂಕ್ಷಿಪ್ತ ರೂಪವು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಪದವಿಗೆ ಪಠ್ಯ ವಿಷಯವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಇವರ ನೂರಾರು ಬರಹಗಳು ಪ್ರಕಟವಾಗಿವೆ. ಸದ್ಯ “ಸ್ನೇಹಗಂಗೆ” ಯ ಮಲಯಾಳo ಆವೃತ್ತಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಗಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ, ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವಿ ನಾಯ್ಕಾಪು ಅವರು ಕನ್ನಡದ ಓರ್ವ ಶ್ರೇಷ್ಠ ನಿರೂಪಕರೂ, ಸಂಘಟಕರೂ ಆಗಿದ್ದಾರೆ.

ಪ್ರಶಸ್ತಿ ವಿಜೇತ ರವಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಗೂ ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಸಹಿತ ವಿವಿಧ ಕನ್ನಡ ಸಂಘಟನೆಗಳು ಅಭಿನಂದಿಸಿವೆ.


Share with

Leave a Reply

Your email address will not be published. Required fields are marked *