ಮಕ್ಕಳನ್ನು ಇತರರೊಡನೆ ಪ್ರಶಂಸಿಸಿ ಮಾತನಾಡಲು ಹೆತ್ತವರು ಹಿಂದೇಟು ಹಾಕಬಾರದು. ಅವರ ಬಗ್ಗೆ ಋಣಾತ್ಮಕ ಅಂಶಗಳನ್ನಷ್ಟೇ ಬಿಂಬಿಸಿದರೆ ಹೆತ್ತವರನ್ನು ಮಕ್ಕಳು ಸಹಿಸಲಾರರು. ಮಕ್ಕಳ ವಂದನಾತ್ಮಕ ಅಂಶಗಳನ್ನೇ ಇತರರೆಡೆ ಹೆಚ್ಚು ಹೆಚ್ಚು ತೆರೆದಿಡಬೇಕು. ಮಕ್ಕಳ ಉತ್ತಮಾಂಶಗಳನ್ನು ಗುರುತಿಸಿ ಹೊಗಳಿದರೆ ಅವರು ಸಾಧಕರಾಗುತ್ತಾರೆ, ಋಣಾತ್ಮಕವಾದವುಗಳನ್ನೇ ಗುರುತಿಸಿ ಜರೆಯುವುದರಿಂದ ಮಕ್ಕಳು ಬಾಧಕರಾಗುವ ಭಯವಿದೆ. ಮಕ್ಕಳ ತಪ್ಪುಗಳನ್ನು ಅವರನ್ನು ಹೊಗಳುತ್ತಾ ತಿದ್ದಲು ಸುಲಭ ಸಾಧ್ಯ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ.ಬಾಯಾರು ಪ್ರತಿಪಾದಿಸಿದರು.
ಅವರು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ಜರಗಿದ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಡೇಶಿವಾಲಯ ಶಾಲೆಯು ಚೇತೋಹಾರಿಯಾಗಿ ಬೆಳೆಯುತ್ತಿದೆ. ಈ ಶಾಲೆಯ ಬಲಾಢ್ಯತೆಗೆ ಊರವರು ಶ್ರಮಿಸಬೇಕೆಂದು ಈ ಸಂದರ್ಭಧಲ್ಲಿ ಬಾಯಾರರು ಕಿವಿ ಮಾತು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾಧವ ರೈ ಭಂಡಸಾಲೆ ಮಾತನಾಡಿ ಮಕ್ಕಳ ಹಬ್ಬದಲ್ಲಿ ಮಕ್ಕಳ ಪ್ರತಿಭೆಯ ಅನವಾರಣ ಮತ್ತು ವರ್ಧನೆಗೆ ಅವಕಾಶವಿದೆ. ಶಾಲೆಯ ಅಭಿವೃದ್ಧಿ ಸಮುದಾಯದ ಹೊಣೆಗಾರಿಕೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮ ಪಂಚಾಯತು ಶಾಲೆಗೆ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆಯಿತ್ತರು. ಊರ ಪ್ರಮುಖರಾದ ಕುರುಂಬ್ಲಾಜೆ ಕಿಟ್ಟಣ್ಣ ಶೆಟ್ಟಿಯವರು ಶುಭ ಹಾರೈಸಿದರು.
ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೊಟ್ಟು, ಸದಸ್ಯರುಗಳಾದ ಶೀನಾ ನಾಯ್ಕ, ಪ್ರಮೀಳಾ, ವಶಿತಾ ನೆತ್ತರ, ಗಣ್ಯರಾದ ವಿದ್ಯಾಧರ್ ರೈ ಪೆರ್ಲಾಪು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ನಿವೃತ್ತ ಶಿಕ್ಷಕ ಶಿವರಾಮ್ ಭಟ್, ಎಸ್.ಡಿ.ಎಂ.ಸಿ. ಸದಸ್ಯರು, ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಬಾಬು ಪೂಜಾರಿ ಸ್ವಾಗತಿಸಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಹರಿಶ್ಚಂದ್ರ ಎಂ ಧನ್ಯವಾದ ನೀಡಿದರು. ಶಿಕ್ಷಕ ಸತೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.