ಉಡುಪಿ: ಸಮುದ್ರ ಮಧ್ಯೆ ಮೀನುಗಾರರಿಗೆ ಹಲ್ಲೆಗೈದು ಲಕ್ಷಾಂತರ ಮೌಲ್ಯದ ಮೀನು‌ ಸುಲಿಗೆ

Share with

ಕಾಪು: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಬಂದರಿನತ್ತ ವಾಪಾಸಾಗುತ್ತಿದ್ದ ಟ್ರಾಲ್ ಬೋಟ್ ನಲ್ಲಿದ್ದ ಮೀನನ್ನು ಇನ್ನೊಂದು ಬೋಟ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ದೋಚಿಕೊಂಡು ಹೋದ ಘಟನೆ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ದೂರದಲ್ಲಿ ನಡೆದಿದೆ.

ಮಂಗಳೂರು ಬಂದರಿನಿಂದ ಮಹಮ್ಮದ್ ಮುಸ್ತಾಫ್ ಎಂಬವರ ಬೋಟ್ ನಲ್ಲಿ ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘುರಾಮಯ್ಯ, ಶಿವರಾಜ್, ಕೆ.ಶೀನು, ಏಳುಮಲೆ, ಚಿನ್ನೋಡು, ರಾಜು ಎಂಬವರು ಮೀನುಗಾರಿಕೆಗೆ ತೆರಳಿದ್ದರು.

ಸಮುದ್ರದ ಒಳಭಾಗದಲ್ಲಿ ಮೀನುಗಳನ್ನು ಹಿಡಿದುಕೊಂಡು ಮಂಗಳೂರು ಬಂದರಿಗೆ ವಾಪಾಸ್ಸು ಹೋಗುತ್ತಿರುವಾಗ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಮುಂಭಾಗಕ್ಕೆ ಹನುಮ ಜ್ಯೋತಿ ಎಂಬ ಹೆಸರಿನ ಪರ್ಶಿನ್ ಬೋಟ್ ಬಂದಿದ್ದು, ಅದರಲ್ಲಿದ್ದ 15-20 ಜನರ ಪೈಕಿ 7-8 ಜನರು ಟ್ರಾಲ್ ಬೋಟ್ ಒಳಗೆ ಹತ್ತಿ ಬೋಟ್ ನಲ್ಲಿದ್ದ ಮೀನಿನ ಬಾಕ್ಸ್ ಗಳನ್ನು ತೆಗೆದು, ಪರ್ಶಿನ್ ಬೋಟ್ ಗೆ ಹಾಕುತ್ತಿದ್ದರು. ಈ ವೇಳೆ ಅವರನ್ನು ತಡೆಯಲು ಹೋದ ಟ್ರಾಲ್ ಬೋಟ್ ನ ಮೀನುಗಾರರ ಪೈಕಿ ಶೀನು ಮತ್ತ ರಘು ರಾಮಯ್ಯರವರನ್ನು ಪರ್ಶಿನ್ ಬೋಟ್ ಪಕ್ಕದಲ್ಲಿ ಬಂದ 5-7 ಜನರಿದ್ದ ನಾಡ ದೋಣಿಯಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಫರ್ಶಿನ್ ಬೋಟ್ ನಲ್ಲಿದ್ದವರು ಟ್ರಾಲ್ ಬೋಟ್ ನಲ್ಲಿದ್ದ 6 ಜನ ಮೀನುಗಾರರಿಗೆ ಕೈಯಿಂದ ಹಾಗೂ ಮರದ ರೀಫ್ ನಿಂದ ಹಲ್ಲೆ ನಡೆಸಿದ್ದಾರೆ. ಇದೇ ವೇಳೆಗೆ ನಾಡ ದೋಣಿಯಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ ಶೀನು ಮತ್ತ ರಘು ರಾಮಯ್ಯ ರವರನ್ನು ವಾಪಸ್ಸು ಕರೆದುಕೊಂಡು ಬಂದು ಟ್ರಾಲ್ ಬೋಟ್ ಗೆ ಹಾಕಿ, ಮೀನುಗಾರರ 4 ಮೊಬೈಲ್ ಹಾಗೂ 2 ಲಕ್ಷ ಮೌಲ್ಯದ 12 ಬಾಕ್ಸ್ ಮೀನುಗಳನ್ನು ಸುಲಿಗೆಗೈದು ಪರಾರಿಯಾಗಿದ್ದಾರೆ. ಈ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *