ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಿಗೆ ಮತದಾನದ ನಡೆಯುವ ದಿನ ಸಾರ್ವತ್ರಿಕ ರಜಾದಿನ ಘೋಷಿಸಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಿದೆ.

ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಲು ಡಿಸೆಂಬರ್ 9 ಮತ್ತು 11 ರಂದು ಆಯಾ ಜಿಲ್ಲೆಗಳಲ್ಲಿ ನೆಗೋಷಿಯೇಬಲ್ ಇನ್ಸ್ಟ್ರಿಮೆಂಟ್ಸ್ ಕಾಯ್ದೆಯಡಿ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿನ ಕಾರ್ಖಾನೆ, ತೋಟ ಮತ್ತು ಇತರ ವರ್ಗದ ಉದ್ಯೋಗಿಗಳಿಗೆ ಸಾರ್ವಜನಿಕ ರಜಾದಿನಗಳನ್ನು ಒದಗಿಸಲು ಅಥವಾ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸೌಲಭ್ಯಗಳನ್ನು ಒದಗಿಸಬೇಕು. ಈ ಸಂಬಂಧ ಉದ್ಯೋಗದಾತರಿಗೆ ಸೂಚಿಸಬೇಕೆಂದು ಚುನಾವಣಾ ಆಯೋಗವು ಕೇರಳ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಕೇಂದ್ರ ಸರಕಾರ ಇಲಾಖೆಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಿಗೆ ಮತದಾನದ ದಿನಗಳಲ್ಲಿ ರಜೆ ನೀಡುವಂತೆ ಆಯೋಗವು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆಯನ್ನು ಕೋರಿದೆ.
ತಿರುವನಂತಪುರಂ, ಕೊಲ್ಲಂ, ಪತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಡಿಸೆಂಬರ್9 ಮತ್ತು ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಡಿಸೆಂಬರ್11 ರಂದು ರಜೆ ಇರುತ್ತದೆ. ಮತದಾನದ ಸಮಯ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ.




