
ಕಾಸರಗೋಡು: ಅಬಕಾರಿ ದಳದವರು ಆದೂರು ಅಬಕಾರಿ ತಪಾಸಣೆ ಕೇಂದ್ರದಲ್ಲಿ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಲು ಮುಂದಾದಾಗ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದಾಗ ಅಪಘಾತಕ್ಕೀಡಾಗಿ ನಿಂತು ಕೊಂಡಿತು. ಕಾರಿನಲ್ಲಿದ್ದ ಇಬ್ಬರು ಪರಾರಿಯಾದರು. ತಪಾಸಣೆ ಮಾಡಿದಾಗ ಕಾರಿನಲ್ಲಿ ಚಿನ್ನ, ಬೆಳ್ಳಿ ಹಾಗೂ ಮಾರಕಾಯುಧಗಳು ಪತ್ತೆಯಾಗಿವೆ.
ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಕೇರಳ ಎಕ್ಸೈಸ್ ಮೊಬೈಲ್ ಇಂಟರ್‌ವೆನ್ಶನ್ ಯೂನಿಟ್ ಘಟಕ ಕಾರನ್ನು ತಪಾಸಣೆ ಮಾಡಿದಾಗ 140.6 ಗ್ರಾಂ ಚಿನ್ನ, 339.2 ಗ್ರಾಂ ಬೆಳ್ಳಿ, 101700 ರೂ. ನಗದು, ನಾಲ್ಕು ಮೊಬೈಲ್ ಫೋನ್‌ಗಳು, ಎರಡು ಸುತ್ತಿಗೆಗಳು, ಬೀಗಗಳು ಇತ್ಯಾದಿ ಪತ್ತೆಯಾಗಿದೆ. ಇವು ಕರ್ನಾಟಕದಿಂದ ಕಳವು ಮಾಡಿದ ಮಾಲುಗಳಾಗಿವೆ ಎಂದು ಶಂಕಿಸಲಾಗಿದೆ.
ಕಾರು ಮತ್ತು ಮಾಲುಗಳನ್ನು ಆದೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಕಾರಿನ ನೋಂದಣಿ ಸಂಖ್ಯೆ ನಕಲಿ ಆಗಿರಬಹುದೆಂದು ಶಂಕಿಸಲಾಗಿದೆ.