ಕಾಸರಗೋಡು- ಕಣ್ಣೂರು ಹೆದ್ದಾರಿ ಕಾಮಗಾರಿ ತಡೆಗೋಡೆ ಕುಸಿತ..! ಕಂಪನಿಗೆ ಕಪ್ಪು ಪಟ್ಟಿ, 9 ಕೋಟಿ ದಂಡ ನೀಡಿ NHI ನೋಟಿಸ್..!!

Share with

ಕಾಸರಗೋಡು : ಕಾಸರಗೋಡು ಕಣ್ಣೂರು ಮಧ್ಯೆ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಆಂಧ್ರ ಮೂಲದ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಸಾ ಸ್ಟ್ರಕ್ಟ‌ರ್ ಲಿಮಿಟೆಡ್ ಕಂಪನಿಯನ್ನು ಕಳಪೆ ಕಾಮಗಾರಿ ನಿರ್ವಹಿಸಿದ್ದಕ್ಕಾಗಿ ಹೆದ್ದಾರಿ ಪ್ರಾಧಿಕಾರವು ಒಂದು ವರ್ಷದ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಿದ್ದು, ಈ ವೇಳೆ ಹೊಸ ಕಾಮಗಾರಿ ಗುತ್ತಿಗೆ ಪಡೆಯದಂತೆ ಬರೆ ಹಾಕಿದೆ. ಇದಲ್ಲದೆ, ಕಳಪೆ ಕಾಮಗಾರಿ ವಿಚಾರದಲ್ಲಿ 9 ಕೋಟಿ ರೂ. ದಂಡ ಹಾಕುವ ಬಗ್ಗೆಯೂ ನೋಟಿಸ್‌ ನೀಡಿದೆ.

ಕಾಸರಗೋಡು ಜಿಲ್ಲೆಯ ಚೆಂಗಳದಿಂದ ನೀಲೇಶ್ವರದ ವರೆಗಿನ 37 ಕಿಮೀ ಹೆದ್ದಾರಿ ಕಾಮಗಾರಿಯನ್ನು ಮೇಘಾ ಕಂಪನಿ ನಿರ್ವಹಿಸುತ್ತಿದೆ. ಇತ್ತೀಚೆಗೆ ಮಳೆಯಿಂದಾಗಿ ಚೆಂಗಳ ಬಳಿಯ ತೆಕ್ಕಿಲ್ ಎಂಬಲ್ಲಿ ಹೆದ್ದಾರಿ ಬದಿಯ ಕಾಂಕ್ರೀಟ್ ಗೋಡೆ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯೆಂಬ ಆಕ್ರೋಶ ಕೇಳಿಬಂದಿತ್ತು. ಗುಡ್ಡವನ್ನು ಲಂಬವಾಗಿ ಕೊರೆದು ತಡೆಗೋಡೆ ನಿರ್ಮಿಸಿದ್ದು, ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಗೋಡೆ ಕುಸಿದು ಬಿದ್ದಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಈ ರೀತಿಯಲ್ಲಿ ಲಂಬವಾಗಿ ಗುಡ್ಡವನ್ನು ಕೊರೆದಿದ್ದರಿಂದ ಕುಸಿತಕ್ಕೆ ಕಾರಣವಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ.

ಸ್ಥಳೀಯರು ಹೇಳುವ ಪ್ರಕಾರ, ಗುಡ್ಡವನ್ನು ಅಗೆದು ಪ್ರತ್ಯೇಕ ತಡೆಗೋಡೆ ನಿರ್ಮಿಸುವ ಬದಲು ಅಲ್ಲಿಗೇ ಕಾಂಕ್ರೀಟ್ ಸುರಿದು ಗೋಡೆ ರೀತಿ ಮಾಡಲಾಗಿತ್ತು. ತೆಳುವಾದ ಕಾಂಕ್ರೀಟ್ ಪದರ ಹಾಕಿದ್ದರಿಂದ ಮಳೆಗೆ ಮಣ್ಣು ಸಮೇತ ಕುಸಿದು ಬಿದ್ದಿದೆ ಎಂದು ದೂರಿದ್ದಾರೆ. ಸೂಕ್ತವಾಗಿ ಇಂಜಿನಿಯರಿಂಗ್ ಮಾಡದೇ ಇದ್ದುದು ಮತ್ತು ತಡೆಗೋಡೆ ರಕ್ಷಣೆಗಾಗಿ ಡ್ರೈನೇಜ್ ಸಿಸ್ಟಮ್ ಸರಿಯಾಗಿ ಮಾಡದೇ ಇದ್ದುದು ಕುಸಿತಕ್ಕೆ ಕಾರಣ ಎಂದು ಎನ್‌ಎಚ್‌ಎಐ ಹೇಳಿಕೆಯಲ್ಲಿ ತಿಳಿಸಿದೆ. ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕ ವ್ಯವಸ್ಥೆಯನ್ನು ಅಪಾಯಕ್ಕೊಡ್ಡಿದ್ದಕ್ಕಾಗಿ ಗುತ್ತಿಗೆ ಕಂಪನಿಯನ್ನು ಡಿಬಾ‌ರ್ ಮಾಡಿದ್ದಾಗಿ ಪ್ರಾಧಿಕಾರ ಹೇಳಿಕೊಂಡಿದೆ.

15 ವರ್ಷಗಳ ಹೈಬ್ರಿಡ್ ಏನ್ವಿಟಿ ಮಾಡೆಲ್ ಗುತ್ತಿಗೆ ಪ್ರಕಾರ, ಎಂಇಐಎಲ್ ಕಂಪನಿಯವರೇ ರಸ್ತೆಯ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತಾರೆ. ಈಗ ಕುಸಿದು ಬಿದ್ದಿರುವ ತಡೆಗೋಡೆಯನ್ನು ಕಂಪನಿ ಖರ್ಚಿನಲ್ಲೇ ಮಾಡಿಕೊಡುವಂತೆ ಹೆದ್ದಾರಿ ಪ್ರಾಧಿಕಾರ ಸೂಚಿಸಿದ್ದು, ಇದೇ ವೇಳೆ ಕಂಪನಿಗೆ ಶೋಕಾಸ್‌ ನೋಟಿಸನ್ನೂ ನೀಡಿ ನೀವು ಈ ರೀತಿ ಮಾಡಿದ್ದಕ್ಕೆ ನಿಮಗ್ಯಾಕೆ 9 ಕೋಟಿ ದಂಡ ಹಾಕಬಾರದೆಂದು ಪ್ರಶ್ನಿಸಿದೆ.

ಇದಕ್ಕೂ ಮುನ್ನ ಹೈವೇ ಕಾಮಗಾರಿಯ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಸೆಂಟ್ರಲ್ ರೋಡ್ ರೀಸರ್ಚ್ ಇನ್ಸ್ ಟಿಟ್ಯೂಟ್ ಹಿರಿಯ ವಿಜ್ಞಾನಿ, ಪಾಲಕ್ಕಾಡ್ ಐಐಟಿ ನಿವೃತ್ತ ಪ್ರೊಫೆಸರ್, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಜಿಯಾಲಜಿಸ್ಟ್ ಅವರನ್ನೊಳಗೊಂಡ ಕಮಿಟಿ ಅವರಿಂದ ವರದಿ ಪಡೆಯಲಾಗಿತ್ತು. ಮಾಡಿ,

ಇದರೊಂದಿಗೆ ಕಳೆದೊಂದು ತಿಂಗಳಿನಲ್ಲಿ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಎರಡನೇ ಕಂಪನಿಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯ ಬ್ಲಾಕ್ ಲಿಸ್ಟ್ ಸೇರಿಸಿದಂತಾಗಿದೆ. ಕಳೆದ ಮೇ 22ರಂದು ಹೈದ್ರಾಬಾದ್ ಮೂಲದ ಕೆಎನ್‌ಆ‌ರ್ ಕನ್ಸ್ ಟ್ರಕ್ಷನ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಎನ್‌ಎಚ್ 66ರಲ್ಲಿ ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಎಂಬಲ್ಲಿ ಈ ಕಂಪನಿ ನಿರ್ವಹಿಸುತ್ತಿದ್ದ ಹೆದ್ದಾರಿ ಕಾಮಗಾರಿ ನಡುವಲ್ಲೇ ಕುಸಿದು ಹೋಗಿತ್ತು. ಇದಕ್ಕಾಗಿ ಕೆಎನ್‌ಆ‌ರ್ ಕಂಪನಿಯನ್ನು ಎರಡು ವರ್ಷ ಕಾಲ ಕಪ್ಪು ಪಟ್ಟಿಗೆ ಹಾಕಿತ್ತು.

ವಿಶೇಷ ಅಂದ್ರೆ, ಈಗ ಕಪ್ಪು ಪಟ್ಟಿಗೆ ಹಾಕಿರುವ ಆಂಧ್ರ ಮೂಲದ ಮೇಘಾ ಇಂಜಿನಿಯರಿಂಗ್ ಕಂಪನಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಚುನಾವಣಾ ಬಾಂಡ್ ಹಗರಣದಲ್ಲಿ 966 ಕೋಟಿ ಮೊತ್ತವನ್ನು ರಾಜಕೀಯ ಪಕ್ಷಗಳಿಗಾಗಿ ದೇಣಿಗೆ ನೀಡಿತ್ತು. ಇದರಲ್ಲಿ 585 ಕೋಟಿ ಬಿಜೆಪಿಗೆ, 195 ಕೋಟಿ ಆಂಧ್ರದಲ್ಲಿ ಆಡಳಿತ ಮಾಡುತ್ತಿರುವ ಭಾರತ್ ರಾಷ್ಟ್ರ ಸಮಿತಿಗೆ ಮತ್ತು ತಮಿಳುನಾಡಿನ ಡಿಎಂಕೆಗೆ 85 ಕೋಟಿ ದೇಣಿಗೆ ನೀಡಿತ್ತು.


Share with

Leave a Reply

Your email address will not be published. Required fields are marked *