ಕಾಸರಗೋಡು: ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಮೇ 29 ಮತ್ತು 30 ರಂದು ತಿರುವನಂತಪುರದ ಕೇಂದ್ರ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ ಜಿಲ್ಲೆಯ ವೃತ್ತಿಪರ ಕಾಲೇಜುಗಳು, ಟ್ಯೂಷನ್ ಸೆಂಟರ್‌ಗಳು, ವಿಶೇಷ ತರಗತಿಗಳು, ಅಂಗನವಾಡಿಗಳು, ಮದ್ರಸಾಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಮೇ 29ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಫ್ಬಶೇಖರ್ ರ್ ತಿಳಿಸಿದ್ದಾರೆ. ಇದೇ ವೇಳೆ ಈ ಹಿಂದೆ ಘೋಷಿಸಲಾದ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರೆಡ್ ಅಲರ್ಟ್ ಜಾರಿಯಲ್ಲಿರುವುದರಿಂದ ಮೇ 29 ಮತ್ತು 30 ರಂದು ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಕಗ್ಗಲ್ಲು ಕೋರೆಗಳಿಗೆ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ರೆಡ್ ಅಲರ್ಟ್ ಘೋಷಣೆಯಾದ ದಿನಗಳಲ್ಲಿ ರಾಣಿಪುರಂ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಕೂಡಾ ಮುಚ್ಚಲಾಗುವುದು. ಅಲ್ಲದೆ ಕಡಲ ತೀರಗಳಿಗೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗದು. ರಾತ್ರಿಯ ವೇಳೆ ಪರ್ವತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




