ಕೊರಗಜ್ಜನ ಕ್ಷೇತ್ರದಲ್ಲಿ ಕತ್ರೀನಾ ಕೈಫ್, ಕೆ ಎಲ್ ರಾಹುಲ್

Share with

ಮಂಗಳೂರು : ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಪ್ ಸೇರಿದಂತೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಭೇಟಿ ನೀಡಿದ್ದಾರೆ.

ಕಾರಣಿಕ ಕ್ಷೇತ್ರವಾಗಿರುವ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಬಾಲಿವುಡ್ ತಂಡವೇ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದೆ.

ತುಳುನಾಡಿನವರೇ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ, ಪುತ್ರಿ, ಅಳಿಯನ ಜೊತೆ ಖ್ಯಾತ ನಟಿ ಕತ್ರಿನಾ ಕೈಫ್ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ.

ಜುಲೈ 14 ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ನಡೆದ ಹರಕೆ ಕೋಲದಲ್ಲಿ ಬಾಲಿವುಡ್ ನಟ ನಟಿಯರು ಭಾಗವಹಿಸಿದ್ದಾರೆ. ಹಲವು ನಟ ನಟಿಯರು ಕ್ಷೇತ್ರಕ್ಕೆ ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ರಾತ್ರಿ ನಡೆದ ಕೋಲದಲ್ಲಿ ಪುರಷರಿಗಷ್ಟೇ ಅವಕಾಶ ಇದ್ದ ಕಾರಣ ಮಹಿಳೆಯರು ಹೊರ ಬಂದಿದ್ದಾರೆ. ಈ ವೇಳೆ ಕ್ಷೇತ್ರದ ಕಚೇರಿಯಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ.

ಹಿಂದಿನಿಂದಲೂ ಕೊರಗಜ್ಜನ ಕ್ಷೇತ್ರದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಆದರೂ ಸೆಲೆಬ್ರಿಟಿಗಳು ಬಂದಾಗ ಕ್ಷೇತ್ರದ ದ್ವಾರದ ಮುಂಭಾಗ ಹಾಗೂ ಕಚೇರಿ ಒಳಗೆ ಇದಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ, ಇಂದು ಬಾಲಿವುಡ್ ನ ದೊಡ್ಡ ತಂಡವೇ ಆಗಮಿಸಿದ ಕಾರಣದಿಂದ ಯಾರಿಗೂ ಫೋಟೋ ವೀಡಿಯೋಕ್ಕೆ ಅವಕಾಶವನ್ನು ನೀಡಿಲ್ಲ. ಇದರ ನಡುವೆಯೂ ಕ್ಷೇತ್ರದಲ್ಲಿದ್ದ ಕತ್ರಿನಾ ಕೈಫ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share with

Leave a Reply

Your email address will not be published. Required fields are marked *