ಗಂಗೊಳ್ಳಿ: ಮರವಂತೆ ಬಳಿ ಹೆದ್ದಾರಿಯಲ್ಲಿ ಕೇರಳದ ಪೊಲೀಸ್ ಜೀಪ್ ಹಾಗೂ ಸ್ಕೂಟರ್ ನಡುವೆ ಅಪಘಾತವಾಗಿದ್ದು ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್ ಅವರು ಆರೋಪಿಯೊಬ್ಬನನ್ನು ಪತ್ತೆಮಾಡಿ ಮುಂಬಯಿಯಿಂದ ಕೋಯಿಕ್ಕೋಡ್‌ಗೆ ಇಲಾಖಾ ಜೀಪ್‌ನಲ್ಲಿ ತೆರಳುತ್ತಿದ್ದಾಗ ಸ್ಕೂಟರ್ ಸವಾರ ಅಜಾಗರೂಕತೆಯಿಂದ ಬಂದು ಜೀಪ್‌ಗೆ ಢಿಕ್ಕಿಯಾಗಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರು ದಾಖಲಾಗಿದೆ.
ಇನ್ನೊಂದು ದೂರನ್ನು ಗುಜ್ಜಾಡಿ ಗ್ರಾಮದ ಮಹೇಶ ಅವರು ನೀಡಿದ್ದು, ಸ್ಕೂಟರ್ ಸವಾರ ಸಂಜೀವ ಅವರು ತನ್ನ ಸ್ಕೂಟರನ್ನು ಚಲಾಯಿಸಿಕೊಂಡು ಮರವಂತೆ ಬಸ್ ನಿಲ್ದಾಣದ ಬಳಿ ಯು ತಿರುವು ತೆಗೆದುಕೊಂಡಾಗ ಪೊಲೀಸ್ ಜೀಪ್ ಸ್ಕೂಟರ್‌ಗೆ ಹಿಂದಿನಿಂದ ಢಿಕ್ಕಿಯಾಗಿದೆ. ಪರಿಣಾಮ ಸಂಜೀವ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.