ಮಂಗಳೂರು: ನಗರದಲ್ಲಿ ಅತಿವೇಗ ಚಾಲನೆ, ಸಂಚಾರಿ ನಿಯಮ ಪಾಲಿಸದೇ ಕೇರಳದ ನೋಂದಣಿಯ ವಾಹನಗಳನ್ನು ಜಪ್ತಿ ಮಾಡಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

ಕೇರಳ ನೋಂದಣಿಯ ವಾಹನಗಳು ಮಂಗಳೂರು ನಗರ ಸೇರಿದಂತೆ ವಿವಿಧಡೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಪೈಕಿ ಶೇ.90ರಷ್ಟು ವಾಹನಗಳು ವಿದ್ಯಾರ್ಥಿಗಳದ್ದು. ಅದರಲ್ಲೂ ದ್ವಿಚಕ್ರ ವಾಹನಗಳೇ ಹೆಚ್ಚು. ನಗರ ಹಾಗೂ ಹೊರ ವಲಯದ ವಿವಿಧ ಕಾಲೇಜುಗಳಲ್ಲಿ ಕಲಿಯುವ ಈ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸಿಸಿ ಕೆಮರಾಗಳ ಮೂಲಕ ಪತ್ತೆ ಹಚ್ಚಿದ ಪ್ರಕರಣಗಳಲ್ಲಿ ನೋಟಿಸ್ ಜಾರಿಗೊಳಿಸಿದರೂ ಪ್ರಯೋ ಜನವಾಗುತ್ತಿಲ್ಲ ಎನ್ನಲಾಗಿತ್ತು.

ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರು, ಸಂಚಾರ ನಿಯಮ ಉಲ್ಲಂಘಿಸುವ ಇಂಥ ವಾಹನ ಗಳನ್ನು ಜಪ್ತಿ ಮಾಡಲು ಸೂಚನೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಕೇರಳ ನೋಂದಣಿಯ ವಾಹನಗಳಿಗೆ ಇಲ್ಲಿಯವರಗೆ ದಂಡದ ನೋಟಿಸ್ ಕಳುಹಿಸಲಾಗುತ್ತಿತ್ತು. ಆದರೆ ಈ ನೋಟಿಸ್ಗಳನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಅಂಶ ತಿಳಿದಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿಯಮ ಉಲ್ಲಂಘಿಸುವ ವಾಹನಗಳನ್ನು ಕೂಡಲೇ ಜಪ್ತಿ ಮಾಡಿ, ದಂಡ ಪಾವತಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.
ಕಾನೂನಿನಲ್ಲಿ ಇದಕ್ಕೆ ಅವಕಾಶವಿದ್ದು, ಕೇರಳ ವಿದ್ಯಾರ್ಥಿಗಳ ಸಂಬಂಧ ಕಾಸರಗೋಡು ಎಸ್ಪಿ ಜತೆ ಇತ್ತೀಚೆಗೆ ಸಭೆ ನಡೆಸಿದಾಗಲೂ ಈ ವಿಷಯವನ್ನು ಗಮನಕ್ಕೆ ತರಲಾಗಿತ್ತು. ಅವರೂ ಸಹಮತ ವ್ಯಕ್ತಪಡಿಸಿದ್ದರು ಎಂದು ಹೇಳಿರುವ ಆಯುಕ್ತರು, ಕಾಲೇಜುಗಳಲ್ಲಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಸಂಚಾರ ನಿಯಮ ಪಾಲನೆ ಬಗ್ಗೆ ನಿಯಮಿತ ವಾಗಿ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದ್ದಾರೆ. ಆಡಳಿತ ಮಂಡಳಿ ಯವರು ಹೇಳಿದರೂ ವಿದ್ಯಾರ್ಥಿಗಳು ಪಾಲನೆ ಮಾಡದಿದ್ದರೆ ವಾಹನ ಜಪ್ತಿ ಅನಿವಾರ್ಯ ಎಂದು ತಿಳಿಸಿದ್ದಾರೆ.
ಕಾಲೇಜುಗಳು ತಿಳಿ ಹೇಳಲಿ
ಸಂಚಾರ ನಿಯಮಗಳ ಉಲ್ಲಂಘನೆ ಯಿಂದ ಸ್ಥಳೀಯರ ಜೀವಕ್ಕೂ ಸಮಸ್ಯೆ ಇರುವ ಕಾರಣ, ಕಾಲೇಜುಗಳೇ ತಮ್ಮಲ್ಲಿರುವ ಕೇರಳ ಸೇರಿದಂತೆ ಹೊರ ರಾಜ್ಯದ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸ ಬೇಕು. ಸ್ಥಳೀಯ ಕಾನೂನು ತಿಳಿಸಿ, ಅದರ ಉಲ್ಲಂಘನೆ ಮಾಡದಂತೆ ತಿಳಿ ಹೇಳಬೇಕು. ಒಂದುವೇಳೆ ಉಲ್ಲಂ ಸಿದ ಸಂದರ್ಭದಲ್ಲಿ ಶಿಸ್ತು ಕ್ರಮ ಜರುಗಿಸಬೇಕು. ಒಟ್ಟಿನಲ್ಲಿ ತಮ್ಮ ವಿದ್ಯಾರ್ಥಿಗಳ ಹೊಣೆಗಾರಿಕೆಯನ್ನು ಆಯಾ ಕಾಲೇಜುಗಳೇ ವಹಿಸಬೇಕು. ಪೊಲೀಸರೂ ಕಾಲೇಜುಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯರಿಗೇ ಬೆದರಿಕೆ
ಹೆಲ್ಮಟ್ ಧರಿಸದೇ ವಾಹನ ಚಾಲನೆ, ತ್ರಿಬ್ಬಲ್ ರೈಡ್ ಸಂಚಾರ, ವಿರುದ್ಧ ಬದಿಯಲ್ಲಿ ವೇಗವಾಗಿ ವಾಹನ ಚಾಲನೆ, ಮಿತಿ ಮೀರಿದ ವೇಗದ ಚಾಲನೆಯ ಪ್ರಕರಣಗಳು ಹೆಚ್ಚಾಗಿವೆ. ಕಾರುಗಳಲ್ಲಿ ಟಿಂಟ್ ಗಾಜು ಅಳವಡಿಸಿ ಸಂಚಾರ, ಅತಿವೇಗದ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಕಂಡು ಬರುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೆ ಸ್ಥಳೀಯರನ್ನೇ ಗದರಿಸುವ ನಿದರ್ಶನಗಳೂ ನಡೆದಿವೆ.




