ತಿರುವನಂತಪುರಂ: ಕೇರಳದ ಎರ್ನಾಕುಲಂನ ಕಳಮಶ್ಶೇರಿಯಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೇ 12 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ಕಳಮಶ್ಶೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಬೆನ್ನಲ್ಲೇ ಇಂದು ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ ಕರೆದಿದ್ದಾರೆ.


ಭಾನುವಾರ ಸ್ಫೋಟ ಸಂಭವಿಸಿದಾಗ 2,000ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಟಿಪಿನ್ ಬಾಕ್ಸ್ ನಲ್ಲಿ ಐಇಡಿ ಬಾಂಬ್ ಇಟ್ಟು ಸ್ಫೋಟ ನಡೆಸಿರುವುದು ತಿಳಿದು ಬಂದಿದೆ. 48 ವರ್ಷದ ಡೊಮಿನಿಕ್ ಮಾರ್ಟಿನ್ ಎಂಬಾತ ತಾನೇ ಬಾಂಬ್ ಇಟ್ಟಿದ್ದು ಅಂತ ಪೊಲೀಸರ ಮುಂದೆ ಶರಣಾಗಿದ್ದಾನೆ.




