ನಿರ್ಮಾಪಕ ಎಮ್.ಎನ್ ಕುಮಾರ್‌, ನಟ ಸುದೀಪ್‌ ನಡುವಿನ ವಿವಾದ; ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಕಿಚ್ಚ ಸುದೀಪ್

Share with

ಸುದೀಪ್

ಬೆಂಗಳೂರು: ನಿರ್ಮಾಪಕ ಎಂ.ಎನ್‌. ಕುಮಾರ್‌ ಹಾಗೂ ನಟ ಕಿಚ್ಚ ಸುದೀಪ್‌ ನಡುವಿನ ವಿವಾದ ಉಂಟಾಗಿದ್ದು, ಕುಮಾರ್‌ ಅವರು ಇತ್ತೀಚೆಗೆ ಪತ್ರಿಕಾಗೀಷ್ಠಿ ನಡೆಸಿ ಸುದೀಪ್‌ ಪರ ವಾಗ್ದಾಳಿ ನಡೆಸಿದ್ದರು. ಈ ಕುರಿತು ಕುಮಾರ್ ನೀಡಿರುವ ದೂರಿಗೆ ಪ್ರತಿಕ್ರಿಯೆ ರೂಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಸುದೀಪ್‌ ಜು.10ರಂದು(ಸೋಮವಾರ) ಸುದೀರ್ಘವಾದ ಪತ್ರ ಬರೆದಿದ್ದಾರೆ.

‘ನಿರ್ಮಾಪಕರೊಬ್ಬರು ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ಅಥವಾ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮ ಜವಾಬ್ದಾರಿ ಆಗಿರುತ್ತದೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ’ ಎಂದು ಸುದೀಪ್‌ ಪತ್ರದಲ್ಲಿ ಬರೆದಿದ್ದಾರೆ.

‘ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ, ಎಂ.ಎನ್. ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪುಯತ್ನಿಸಿದ್ದೇನೆ. ನಾನು ಹಲವು ಬಾರಿ ಮುಖತಃ ಪ್ರಯತ್ನಪಟ್ಟರೂ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ, ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಪದ ಹುಟ್ಟಿಕೊಂಡಿತು. ಸಂಧಾನ ಎಂದರೇನು? ಆ ನಿರ್ಮಾಪಕರು, ಅವರೆಲ್ಲ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು. ನಾನು ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧನಾಗಿರುವೆ’ ಎಂದು ಸುದೀಪ್‌ ಪತ್ರದಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *