ಕೋಲಾರ, ಮಾರ್ಚ್ 15: ಗ್ಯಾಸ್ ಸಿಲಿಂಡರ್ (LPG Cylinder) ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಖಾಲಿ ಗ್ಯಾಸ್ ಹಿಡಿದು ಜನರು ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ಗಳನ್ನು ಪೂರೈಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಈ ಮಧ್ಯೆ ನಗದರಲ್ಲಿ ಹೋಟೆಲ್, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್ಗಳನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ.
ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. 2 ಬೇಕರಿ ಮತ್ತು 5ಕ್ಕೂ ಹೆಚ್ಚು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಮಾಲೀಕರು ವಾಣಿಜ್ಯ ಸಿಲಿಂಡರ್ ಬದಲು ಗೃಹಬಳಕೆ ಸಿಲಿಂಡರ್ ಬಳಸುತ್ತಿರುವುದು ಪತ್ತೆ ಆಗಿದೆ.
ಸದ್ಯ 21 ಸಿಲಿಂಡರ್ಗಳನ್ನು ವಶಕ್ಕೆ ಪಡೆದ ತಹಶೀಲ್ದಾರ್ ಸುಜಾತಾ ಎಚ್ಚರಿಕೆ ಕೂಡ ನೀಡಿದ್ದಾರೆ. ಇನ್ನು ದಾಳಿ ವೇಳೆ ಕೆಲವು ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಪತ್ತೆ ಆಗಿದೆ. ಹೀಗಾಗಿ ಸುರಭಿ ಹೋಟೆಲ್ನಲ್ಲಿ ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಹೋಟೆಲ್ಗಳು ಬಂದ್: ಆಲೂಗಡ್ಡೆ ಸೇಲ್ ಆಗದೇ ರೈತ ಕಂಗಾಲು
ಜಿಲ್ಲೆಯಲ್ಲಿ ರೈತರಿಗೆ ಯುದ್ಧ ಬಿಸಿ ಮುಟ್ಟಿಸಿದೆ. ಸಿಲಿಂಡರ್ ಅಭಾವದಿಂದ ಹೋಟೆಲ್ಗಳು ಬಂದ್ ಆಗಿರೋದ್ರಿಂದ, ತರಕಾರಿಗಳನ್ನ ತೆಗೆದುಕೊಳ್ಳೋರೇ ಇಲ್ಲ. 1,200 ರಿಂದ 1,300 ರೂ. ಇದ್ದ ಮೂಟೆ ಆಲೂಗಡ್ಡೆ, 500 ರಿಂದ 600 ರೂಪಾಯಿಗೆ ಕುಸಿತ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟಿನ್ ಮಹಿಳೆಯರು
ವಾಣಿಜ್ಯ ಸಿಲಿಂಡರ್ ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ. ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳೆಯರನ್ನ ಕೆಲಸಕ್ಕೆ ಬರಬೇಡಿ ಅಂತ ಗುತ್ತಿಗೆದಾರರು ಹೇಳಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಆಟೋ ಎಲ್ಪಿಜಿ ಗ್ಯಾಸ್ ದರ ಏರಿಕೆ ಆಗಿದೆ. ಪ್ರತಿ ಲೀಟರ್ಗೆ 23 ರೂ. ಹೆಚ್ಚಳ ಮಾಡಿದ್ದು, 52 ರೂ. ಇದ್ದ ಲೀಟರ್ ಎಲ್ಪಿಜಿ, 75 ರೂಪಾಯಿ ಆಗಿದೆ. ಎಲ್ಪಿಜಿ ಹೆಚ್ಚಳ ಮಾಡಿದೆಎ ಪ್ರಯಾಣಿಕರು ಹೆಚ್ಚುವರಿ ಹಣ ಕೊಡ್ತಾರಾ ಅಂತ ಚಾಲಕರು ಕಿಡಿಕಾರುತ್ತಿದ್ದಾರೆ.





