ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಸ್ಮಿತಾಯ್; ಅಮೇರಿಕಾದ ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಿಗೆ ಕೊಂಕಣಿ ಸಿನೆಮಾ

Share with

ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ‘ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ, ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಲ್ಲಿ, 2023 ಡಿಸೆಂಬರ್ 02 ರಂದು ಪೂರ್ವಾಹ್ನ 11.00 ಗಂಟೆಗೆ, ಎ ಎಮ್ ಸಿ ಥಿಯೆಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲ್.

ಸೆಪ್ಟೆಂಬರ್ 15ರಂದು ತೆರೆಗೆ ಬಂದ ಅಸ್ಮಿತಾಯ್ ಚಲನಚಿತ್ರದ 400ಕ್ಕೂ ಮಿಕ್ಕಿ ದೇಖಾವೆಗಳು ನಡೆದಿದ್ದು, ಇದುವರೆಗೆ ವಿಶ್ವದಾದ್ಯಂತ 13 ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಕೊಂಕಣಿ ಚಲನಚಿತ್ರ ಕ್ಷೇತ್ರದಲ್ಲಿ ಇದೊಂದು ದಾಖಲೆಯೇ ಸರಿ.

‘ಚಲನಚಿತ್ರದಿಂದ ಚಳುವಳಿ’ ಎಂಬ ಧ್ಯೇಯದೊಡನೆ ಮಾಂಡ್ ಸೊಭಾಣ್ ಈ ಚಿತ್ರವನ್ನು ನಿರ್ಮಿಸಿದ್ದು ಇದುವರೆಗೆ 400ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡಿದ್ದು, ಭಾರತ, ಯುಎಇ, ಕುವೇಯ್ಟ್, ಬಾಹ್ರೇಯ್ನ್, ಸೌದಿ, ಒಮಾನ್, ಕತಾರ್, ಇಂಗ್ಲಂಡ್, ಆಯರ್ಲಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ ಮತ್ತು ಕೆನಡಾ ದಲ್ಲಿ ಪ್ರದರ್ಶನಗೊಂಡಿದೆ.

ಇನ್ನೂ ಹಲವು ದೇಶಗಳಲ್ಲಿ, ಮುಂಬಯಿ, ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಜನರ ವೀಕ್ಷಣೆಗೆ ಅನುವು ಮಾಡಿ ಕೊಡಲಾಗುತ್ತಿದೆ. ಮಂಗಳೂರಿನ ಭಾರತ್ ಸಿನೆಮಾದಲ್ಲಿ ಈ ಸಿನೆಮಾ ಹತ್ತನೇ ವಾರದಲ್ಲಿದ್ದು ದಿನಂಪ್ರತಿ ಸಂಜೆ 5.00 ಗಂಟೆಗೆ ಒಂದು ದೇಖಾವೆ ನಡೆಯುತ್ತಿದೆ.

ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದು ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಸಂಕಲನ ಮಾಡಿದ್ದಾರೆ. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.

ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಮುದಗೊಳಿಸುವ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕ ನಿಹಾಲ್ ತಾವ್ರೊ ಹಾಗೂ ಇತರೆ ಗಾಯಕರು ದನಿಗೂಡಿಸಿದ್ದಾರೆ. ಡೆನಿಸ್ ಮೊಂತೇರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ, ಆಲ್ವಿನ್ ವೇಗಸ್ ಹೀಗೆ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇತರ ಸುಮಾರು 500ಕ್ಕೂ ಮಿಕ್ಕಿ ಕಲಾವಿದರು ಪ್ರಥಮ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿದ್ದಾರೆ.


Share with

Leave a Reply

Your email address will not be published. Required fields are marked *