ಸೀತಾಂಗೋಳಿ : ಒಂದು ಕಾಲದಲ್ಲಿ ದೇವರ ಮೂರ್ತಿಗಳೆಲ್ಲಾ ಕಲ್ಲಿನದ್ದಾಗಿತ್ತು. ಆ ಕಾಲದಲ್ಲಿ ಮನುಷ್ಯರ ಮನಸ್ಸು ಬಂಗಾರವಾಗಿತ್ತು. ಆದರೇ ಯಾವಾಗ ದೇವರ ಮೂರ್ತಿಗಳೆಲ್ಲಾ ಬೆಳ್ಳಿ ಬಂಗಾರದಾಯಿತೋ ಅಂದಿನಿಂದ ಮನುಷ್ಯರ ಮನಸ್ಸು ಅದಕ್ಕಿಂತಲೂ ಕೆಳಮಟ್ಟಕ್ಕಿಳಿಯಿತು ಎಂದು ಶ್ರೀಕೃಷ್ಣಾ ಶಿವಕೃಪಾ ಅಭಿಪ್ರಾಯ ಪಟ್ಟಿದ್ದಾರೆ. ಅವರು ಮುಕಾರಿಕಂಡ ಬಳಿಯ ಕುಕ್ಕೂಡೆಲ್ ನ ಶ್ರೀ ಕೊರಗಜ್ಜ ಬಾಲಗೋಕುಲ ಕುಣಿತ ಭಜನಾ ಸಂಘದ ಪ್ರಥಮ ವಾರ್ಷಿಕೋತ್ಸವವನ್ನು ದೀಪಪ್ರಜ್ವಲನಗೊಳಿಸಿ ಉದ್ಘಾಟಿಸಿದ ಬಳಿಕ ಅವರು ಧಾರ್ಮಿಕ ಭಾಷಣ ಮಾಡುತ್ತಿದ್ದರು.
ಮಕ್ಕಳ ಮನಸ್ಸೆಂದರೇ ಅದು ಹಸಿಮಣ್ಣಿನ ತರ. ಅದನ್ನು ಮುಟ್ಟಿದರೆ ಬೆರಳಚ್ಚೂ ಮೂಡಬಹುದು. ಅದೇ ಹದಮಾಡಿ ರೂಪುಕಲ್ಪನೆ ಕೊಟ್ಟರೆ ರಾಮನ ಮೂರ್ತಿಯೂ ಆದೀತು, ಕೃಷ್ಣನ ಮೂರ್ತಿಯೂ ಆದೀತು. ಅಂತಃ ಮುಗ್ಧ ಹಾಗೂ ಸ್ವಚ್ಛವಾದ ಮನಸ್ಸಲ್ಲಿ ದೇವರ ನಾಮಸ್ಮರಣೆಯಾದ ಭಜನೆಯನ್ನು ತುಂಬಿದರೆ ಮುಂದೆ ಅವರು ಸಮಾಜವನ್ನು ಬೆಳಗುವ ದೀಪವಾಗಿ ರೂಪುಗೊಳ್ಳುವರು. ಅವರಿಂದ ಯಾವ ದುಷ್ಕತ್ಯಗಳಾಗಲೀ ಸಮಾಜ ಬಾಹಿರ ಪ್ರವೃತ್ತಿಯಾಗಲೀ ನಡೆಯದು. ಆದುದರಿಂದ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆಯಲು ಮಕ್ಕಳನ್ನೆಲ್ಲಾ ಬಾಲಗೋಕುಲಕ್ಕೆ ಕಳುಹಿಸಲು ಹೆತ್ತವರು ಮುಂದೆ ಬರಬೇಕೆಂದು ಅವರು ತಿಳಿಸಿದರು.
ಶುಭನುಡಿಯನ್ನಾಡಿದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದ ಸೇವಾಸಮಿತಿಯ ಅಧ್ಯಕ್ಷರಾದ ಶಂಕರ ನಾರಾಯಣ ಭಟ್ ಮರಿಮನೆ ಅವರು ಮಾತನಾಡುತ್ತಾ ಭಜನೆಯಿಂದ ವಿಭಜನೆ ಬಾರದು. ಎಲ್ಲರನ್ನೂ ಒಗ್ಗೂಡಿಸುವ ಸಮಾನತೆ, ಸಾಮರಸ್ಯದ ಮಂತ್ರವಾಗಿದೆ ಭಜನೆ. ಆದುದರಿಂದ ಪ್ರತಿಯೊಂದು ಮನೆಯಲ್ಲೂ ಭಜನೆ ಮಾಡುವ ಸಂಸ್ಕಾರ ಬೆಳೆದು ಬರಬೇಕು. ಎಲ್ಲರೂ ಭಾವಿಸೋದು ಇಲ್ಲಿರೋದೆಲ್ಲಾ ನನ್ನದು ಎಂದಾಗಿದೆ. ಆದರೇ ಯಾವುದನ್ನು ನಮ್ಮದೆಂದು ಹೇಳುತ್ತೇವೆಯೋ ಅದೆಲ್ಲಾ ನಮ್ಮದಾಗಿರೋದಿಲ್ಲ. ಒಂದು ಕಾಲದಲ್ಲಿ ಅದೇ ವಸ್ತುವನ್ನು ಅದೇ ಮಣ್ಣನ್ನು ಬೇರೆ ಯಾರೋ ಉಪಯೋಗಿಸಿಕೊಂಡಿರುತ್ತಾರೆ. ಆದರೇ ನಾವು ಬದುಕಲ್ಲಿ ಗಳಿಸಿದ ಒಳ್ಳೆಯ ಹೆಸರು, ಸಮಾಜಕ್ಕಾಗಿ ಮಾಡಿದ ಒಳ್ಳೆಯ ಕಾರ್ಯ ಎಲ್ಲವೂ ಶಾಶ್ವತವಾಗಿ ಉಳಿಯುತ್ತೆ. ಶ್ರೀ ಕೊರಗಜ್ಜನ ಸನ್ನಿಧಿಯಲ್ಲಿ ಆರಂಭಗೊಂಡ ಈ ಬಾಲಗೋಕುಲವು ಉತ್ತರೋತ್ತರ ಉನ್ನತಿಯನ್ನು ಪಡೆಯುವಂತಾಗಲಿ ಎಂದು ಹಾರೈಸಿದರು. ಶ್ರೀ ಕೊರಗಜ್ಜ ಬಾಲಗೋಕುಲ ಕುಣಿತ ಭಜನಾ ಸಂಘದ ಅಧ್ಯಕ್ಷ ರಾಮಚಂದ್ರ ಕುಲಾಲ್ ಕುಳಾಲನಗರ ಅಧ್ಯಕ್ಷತೆ ವಹಿಸಿದ್ದರು. ಅನೋಡಿಪಳ್ಳ ಶ್ರೀ ಈರ್ವರು ಉಳ್ಳಾಕುಲು ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ಯಾಮ ಪ್ರಸಾದ್ ಎಯ್ಯೂರು, ಪಂಚಾಯತ್ ಸದಸ್ಯರುಗಳಾದ ಜಯಂತಿ ಹಳೆಮನೆ, ಕೇಶವ ಸಜಂಕಿಲ, ಶ್ರೀ ಕೊರಗಜ್ಜ ಸನ್ನಿಧಿಯ ಪೂಜಾ ಪಾತ್ರಿ ಶಿವ ಕುಕ್ಕೂಡೆಲ್ ಮದಲಾದವರು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಕುಣಿತ ಭಜನಾ ಸಂಘದ ಶಿಕ್ಷಕರಾದ ರವಿರಾಜ್ ಏಳ್ಕಾನ, ಶಿಕ್ಷಕಿಯರಾದ ಪ್ರಜ್ವಲಿ ಮಣಿಯಂಪಾರೆ, ವಿಶಾಲಾಕ್ಷಿ, ಕಿಶೋರ್ ಮುಕಾರಿಕಂಡ ಅವರನ್ನು ಫಲಪುಷ್ಪ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಬಾಲಗೋಕುಲ ಹಾಗೂ ಕುಣಿತ ಭಜನಾಸಂಘದ ಮಕ್ಕಳಿಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ರೂಪ ಆರೋಳಿ ಕೊಡಮಾಡಿದ ಶಾಲು ಹಾಗೂ ನಾರಾಯಣ ಮುಕಾರಿಕಂಡ ಅವರು ಕೊಡಮಾಡಿದ ಸ್ಮರಣಿಕೆಯನ್ನು ಗಣ್ಯರ ಮೂಲಕ ವಿತರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜಿರ್ಪಳ್ಳಕಟ್ಟೆ ಶಾಸ್ತಾನಗರ ಇದರ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ಹಿರಿಯರಾದ ರಾಜೀವಿ ಕುಕ್ಕೂಡೆಲ್ ದೀಪಬೆಳಗಿಸಿದ ಬಳಿಕ ಬಾಲಗೋಕುಲದ ಮಕ್ಕಳಿಂದ ಇದೇ ಸಂಧರ್ಭದಲ್ಲಿ ಕುಣಿತ ಭಜನೆ ನಡೆಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಮಾತೆಯರು ಪ್ರಾರ್ಥನೆ ಹಾಡಿದರು. ಬಾಲಗೋಕುಲ ಕುಣಿತ ಭಜನಾ ಸಂಘದ ಪ್ರಧಾನ ಕಾರ್ಯದರ್ಶಿ ರೂಪಾ ಆರೋಳಿ ಸ್ವಾಗತಿಸಿ, ಉಪಾಧ್ಯಕ್ಷ ರಮೇಶ ಮುಕಾರಿಕಂಡ ವಂದಿಸಿದರು. ಹವ್ಯಾಸಿ ಪತ್ರಕರ್ತ, ಸಾಹಿತಿ ಭಗತ್ ಗಣೇಶ್ ಮುಂಡಾನ್ ತ್ತಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.