ಉಡುಪಿ: ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ 30 ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42), ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂದು ಗುರುತಿಸಲಾಗಿದೆ.
30 ಗ್ರಾಂ ನಕಲಿ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕ್, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ ಪಡುಬಿದ್ರಿ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ ನೀಡಿರುವ ಮಾಹಿತಿಯಂತೆ ಪೊಲೀಸರು ಇದೀಗ ಈ ನಾಲ್ವರು ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ 916 ಹಾಲ್ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್, ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
92 ಶೇ. ಚಿನ್ನಾಭರಣಗಳಂತೆಯೇ ಸಾಚಾ ಚಿನ್ನ ಇದೆಂದು ನಂಬಿದ ಬ್ಯಾಂಕು, ಸೊಸೈಟಿಗಳು ಚಿನ್ನಾಭರಣ ಈಡಿನ ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಿ ಇದರಲ್ಲೂ ನಕಲಿ – ಅಸಲಿಗಳನ್ನು ಪತ್ತೆ ಮಾಡಲಾಗಿರಲಿಲ್ಲ. ಉಡುಪಿಯ ಬಿಡ್ಡುದಾರರೊಬ್ಬರು ಇದನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತು ಆತನ ಪತ್ನಿಯ ಚಿನ್ನಾಭರಣ ಸಾಲದ ಪ್ರಕರಣವು ಹೊರಬಂದಿತ್ತು. ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್ ನ ಪಡುಬಿದ್ರಿ ಶಾಖೆಯಲ್ಲಿ 2022ರ ಸೆ. 1ರಿಂದ ಫೆ. 26, 2024ರವರೆಗೆ ಈ ದಂಪತಿ 180ಗ್ರಾಂ ನಕಲಿ ಚಿನ್ನವನ್ನಿಟ್ಟು 8.08ಲಕ್ಷಗಳನ್ನು ಪಡೆದುಕೊಂಡಿದೆ.
ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಆರೋಪಿಗಳು ಇದೇ ಸುಮಾರು 2ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023ರಿಂದ ಫೆ. 26, 2024ರ ಅವಧಿಯಲ್ಲಿ 72ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಗಳನ್ನು ರಾಜೀವ್ ದಂಪತಿ ಪಡೆದಿದ್ದರು. ಆರೋಪಿ ರಾಜೀವ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.