ಮಂಗಳೂರು: ನಗರ ಕೊಡಿಯಾಲಬೈಲಿನ ಎಂಪಾಯರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ದಿನಸಿ ಸಹಿತ ವಿವಿಧ ಸಾಮಗ್ರಿಗಳ ಮಾರಾಟದ ಸೂಪರ್ ಬಜಾರ್ ಮಳಿಗೆಯೊಂದಕ್ಕೆ ಕಳ್ಳರು ನುಗ್ಗಿ 3.05 ಲಕ್ಷ ರೂ. ನಗದು ಕಳವು ಮಾಡಿದ್ದಾರೆ.

ಆ. 20ರಂದು ರಾತ್ರಿ 9.15ಕ್ಕೆ ಮಳಿಗೆಯ ಸಿಬಂದಿ ವ್ಯವಹಾರ ಮುಗಿಸಿ ಬೀಗ ಹಾಕಿ ತೆರಳಿದ್ದಾರೆ. 21ರಂದು ಬೆಳಗ್ಗೆ 7.45ರ ವೇಳೆಗೆ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಟೇಬಲ್ ಎದುರಿನಲ್ಲಿ ಅಳವಡಿಸಿದ್ದ ಶೋಕೇಸ್‌ನ ಬಾಗಿಲುಗಳು ತೆರೆದಿರುವುದು ಕಂಡು ಬಂದಿದೆ. ಇನ್ನಷ್ಟು ಪರಿಶೀಲಿಸಿದಾಗ ಒಳಗೆ ಇದ್ದ ಸೇಫ್ ಲಾಕರ್ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದಾಗ ಮಾಲ್‌ನ ದಕ್ಷಿಣ ಭಾಗದಲ್ಲಿ ಶೋಕೇಸ್‌ನಲ್ಲಿದ್ದ ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಮಳಿಗೆಯ ಕ್ಯಾಶ್ ಕೌಂಟರ್‌ನ ಡ್ರಾವರ್ ಕೂಡ ತೆರೆದುಕೊಂಡಿತ್ತು.
ಈ ಸಂಬಂಧ ಮಳಿಗೆಯ ಸಿಸಿ ಕೆಮರಾ ದೃಶ್ಯಾವಳಿ ಪರಿಶೀಲಿಸಿದಾಗ ನಸುಕಿನ ಜಾವ 2 ಗಂಟೆ ವೇಳೆಗೆ ಮೂರು ಮಂದಿ ಕಳ್ಳರು ಮಾಲ್‌ನ ಪರಿಸರದಲ್ಲಿ ಸುತ್ತಾಡಿ, ಮಳಿಗೆಯ ದಕ್ಷಿಣ ಭಾಗದಲ್ಲಿ ಗೋಡೆಯ ಬದಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್ ಬಾಕ್ಸ್‌ಗಳ ಮೂಲಕ ಮೇಲಕ್ಕೆ ಹತ್ತಿ ಮೇಲ್ಬಾಗದಲ್ಲಿದ್ದ ಗಾಜನ್ನು ತೆಗೆದು ಅದರ ಮೂಲಕ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದ 5 ಸಾವಿರ ರೂ. ನಗದು ಮತ್ತು 3 ಲಕ್ಷ ರೂ. ನಗದು ಇರಿಸಿದ್ದ ಸೇಫ್ ಲಾಕರನ್ನು ತೆಗೆದುಕೊಂಡು 3.55ರ ವೇಳೆಗೆ ಒಳಗೆ ಬಂದ ದಾರಿಯಿಂದಲೇ ಹೊರಗೆ ಹೋಗಿರುವುದು ಕಂಡು ಬಂದಿದೆ.
ಈ ಬಗ್ಗೆ ಮಳಿಗೆಯ ಮಾಲಕರ ಸೂಚನೆಯಂತೆ ಸಿಬಂದಿ ಬರ್ಕೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿ ಕೆಮರಾಗಳ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.




