ಬೆಳ್ತಂಗಡಿ: ಪ್ರಪಂಚದ ನಾಗರಿಕತೆ ಹುಟ್ಟಿಕೊಂಡಾಗ ಸಾಹಿತ್ಯ, ಕಲೆ ಆರಂಭವಾಗಿದ್ದು, ಶತಮಾನದ ಹಿಂದೆ ಆರಂಭಗೊಂಡ ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆದಿದ್ದು, ಕಥೆಗಳಿಗೆ ಇದು ಸುವರ್ಣ ಕಾಲವಾದರೂ ಬಹುಮಾನಕ್ಕಾಗಿಯೇ ಕಥೆ ರಚನೆಯಿಂದ ಉತ್ತಮ ಕಥೆಗಾರರು ಮೂಲೆಗುಂಪಾಗುತ್ತಿರುವುದು ಖೇದಕರ ಎಂದು ಹಿರಿಯ ಸಾಹಿತಿ-ಅಂಕಣಕಾರ ಪ್ರೊ | ಪ್ರೇಮಶೇಖರ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭ ನಡೆದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಪ್ರಾಚೀನ ಕೃತಿ ಗಿಲ್ಲಮಿಸ್ ಮನುಷ್ಯ ಬದುಕುವ ಕ್ರಮವನ್ನು ವಿವರಿಸಿದ್ದು, ಮಹಾಭಾರತ, ರಾಮಾಯಣದಂತಹ ಕೃತಿಗಳು ಕೂಡ ಬದುಕುವ ಕ್ರಮವನ್ನು ವಿವರಿಸಿತ್ತು. ಕನ್ನಡದ ನವೋದಯ ಸಾಹಿತ್ಯವು ಮನುಷ್ಯ ಜೀವನವನ್ನು ತಿಳಿಸಿದ್ದು, ಪ್ರಗತಿ ಶೀಲ ಸಾಹಿತ್ಯ ಅಭಿವೃದ್ಧಿಯ ಬದುಕನ್ನು ತೋರಿಸಿದೆ. ನವ್ಯ ಸಾಹಿತ್ಯದ ಬಳಿಕ ಬಂದ ಬಂಡಾಯ ಸಾಹಿತ್ಯ ಹೋರಾಟದ ಬದುಕನ್ನು ತೋರಿಸಿದೆ. ನಮ್ಮ ಸಾಹಿತ್ಯ ಪ್ರೇಮ ಸಾಮಾಜಿಕ ಕಳಕಳಿ ಹೊಂದಿರ ಬೇಕಾಗಿರುವುದು ಅಗತ್ಯ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಿ, ಲಕ್ಷದೀಪೋತ್ಸವ ಕೇವಲ ಜಾತ್ರೆ ಯಾಗಿ ಮುಗಿಯಬಾರದು, ಧರ್ಮ ಸಮನ್ವಯ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧ ವರ್ಧನೆ, ಬೌದ್ಧಿಕವಿಕಸನದ ದೃಷ್ಟಿಯಿಂದ ಅವರು ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆಯನ್ನು 1933ರಲ್ಲಿ ಪ್ರಾರಂಭಿಸಿದರು. ಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು, ಸರ್ವರ ಹಿತವನ್ನು ಬಯಸುವ ಸಾಹಿತ್ಯ, ಸಾತ್ವಿಕವಾದ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದರು.
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅಧ್ಯಕ್ಷೀಯ ಭಾಷಣ ಮಾಡಿ, ಸಾಹಿತ್ಯ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಅದು ಬದುಕಿಗೆ ಸಂಬಂಧಪಟ್ಟದ್ದಾಗಿದ್ದು, ಸಮೃದ್ಧ ವಾಗಿರುವ ಕನ್ನಡ ಭಾಷೆಯನ್ನು ಬೆಳೆಸದೆ ಸಾಹಿತ್ಯ ಸೃಷ್ಟಿ ಸಾಧ್ಯವೇ ಇಲ್ಲವಾಗಿದೆ. ಭಾಷೆ ಸಾಹಿತ್ಯಕ್ಕೆ ಸೇತುವೆಯಾಗಿದ್ದು, ಅಂತಹ ಭಾಷೆಗೆ ಸವಾಲು ಬಂದಿದೆ. ಕಳೆದ 25 ವರ್ಷಗಳಿಂದ ಆಂಗ್ಲ ಪದಗಳಿಂದ ಕನ್ನಡ ವಿರೂಪವಾಗಿರುವುದು ಆತಂಕದ ವಿಚಾರವಾಗಿದೆ. ರಾಜ್ಯದಲ್ಲಿ ಕನ್ನಡಕ್ಕೆ ಸಂಬಂಧಿಸಿದ 35 ಸಂಸ್ಥೆಗಳಿದ್ದರೂ ಕನ್ನಡಕ್ಕೆ ಅಪಾಯ ಬಂದಿರುವುದು ಖೇದಕರವಾಗಿದೆ. ಭಾಷಾಭಿಮಾನದ ವಿಚಾರದಲ್ಲಿ ಕರಾವಳಿ ಜಿಲ್ಲೆಯ ತುಳು ಭಾಷಿಗರು ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ ಎಂದರು.
ಧರ್ಮಸ್ಥಳ ಕ್ಷೇತ್ರವು ಅಗ್ರಪಂಕ್ತಿಯ ಧಾರ್ಮಿಕ ಶ್ರದ್ದಾಕೇಂದ್ರವಾಗಿದೆ. ಒಂದು ಧಾರ್ಮಿಕ ಕೇಂದ್ರವನ್ನು ಸಮಾಜದ ಅಭಿವೃದ್ಧಿಗೆ ಹೇಗೆ ಬಳಸಬಹುದು ಎಂಬುದನ್ನು ಹೆಗ್ಗಡೆಯವರು ತೋರಿಸಿ ಕೊಟ್ಟಿದ್ದಾರೆ. ದೀಪ ಎನ್ನುವುದು ಜ್ಞಾನದ ಶಾಲಾಕೆಯಾ ಗಿದ್ದು, ಕತ್ತಲನ್ನು ದೂರಮಾಡಿ ನಮ್ಮನ್ನು ಜ್ಞಾನದ ಕಡೆಗೆ ಕೊಂಡು ಹೋಗುವ ಯಾತ್ರೆ ಯಾಗಿದೆ ಎಂದರು.
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರು ಉಪನ್ಯಾಸಕರನ್ನು ಸಮ್ಮಾನಿಸಿದರು. ಪ್ರೊ| ಪ್ರೇಮಶೇಖರ ಅವರ ಅಷ್ಟಿದ್ದ ಭಾರತ ಇಷ್ಟಾಗಿ ಹೋದ ಕರುಣಕಥೆ, 75ರ ಭಾರತ ಈ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಎಸ್. ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಹೇಮಾವತಿ ವಿ. ಹೆಗ್ಗಡೆ ಹಾಗೂ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಬೆಂಗಳೂರಿನ ವ್ಯಾಖ್ಯಾನಕಾರೆ ಶಾಂತಾ ನಾಗಮಂಗಲ, ವಿವೇಕಹಂಸ ಮಾಸಪತ್ರಿಕೆ ಸಂಪಾದಕ ಡಾ| ರಘು ವಿ., ಧಾರವಾಡದ ಸಾಹಿತಿ ಡಾ| ಬಿ.ಎಂ.ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡಿದರು.
ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ಹಾಗೂ ಎಜುಕೇಶನ್ ಸೊಸೈಟಿಯ ನಿರ್ದೇಶಕ (ಯೋಜನೆಗಳು) ಡಿ. ಶ್ರೇಯಸ್ ಕುಮಾರ್ ಅವರು ಸಮ್ಮಾನ ಪತ್ರ ವಾಚಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಸದಸ್ಯೆ ರಾಜಶ್ರೀ ಎಸ್. ಹೆಗ್ಡೆ ವಂದಿಸಿದರು. ಪ್ರಾಧ್ಯಾಪಕ ಡಾ| ಶ್ರೀಧರ ಭಟ್ ಹಾಗೂ ಉಪನ್ಯಾಸಕ ಡಾ| ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ
ಬುಧವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನೆರವೇರಿತು. ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಕ್ಷೇತ್ರದ ಭಕ್ತರಾದ ಬೆಂಗಳೂರಿನ ಹೂವಿನ ವ್ಯಾಪಾರಿಗಳು ರಾಮು ಹಾಗೂ ರಮೇಶ ಅವರ ನೇತೃತ್ವದಲ್ಲಿ ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಜತೆಗೆ ಭಕ್ತರ ತಂಡ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಿತ್ತು.




