ಪೈವಳಿಕೆ: ಹದಗೆಟ್ಟು ಶೋಚನೀಯ ಹಾಗೂ ಇಕ್ಕಟ್ಟಿನಿಂದ ಕೂಡಿದ ಲಾಲ್ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆಯ ರಸ್ತೆ ಕೊನೆಗೂ ಅಭಿವೃದ್ದಿಗೊಳಿಸಲು ತೀರ್ಮಾನಿಸಲಾಗಿದ್ದು, ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪೈವಳಿಕೆ ಪಂಚಾಯತ್ನ 1,2,3 ಹಾಗೂ 19ನೇ ವಾರ್ಡ್ ಸಂಗಮಿಸುವ ಈ ರಸ್ತೆಗೆ ನಾಲ್ಕೂವರೆ ಕೋಟಿ ರೂಪಾಯಿ ಮಂಜೂರುಗೊoಡಿದೆ. ಲಾಲ್ಭಾಗ್ನಿಂದ ಕುರುಡಪದವು ತನಕ ಒಟ್ಟು ಏಳು ಮುಕ್ಕಾಲು ಕಿಲೋ ಮೀಟರ್ ಉದ್ದ ಹಾಗೂ ಐದೂವರೆ ಮೀಟರ್ ಅಗಲ ರಸ್ತೆ ನಿರ್ಮಾಣಗೊಳ್ಳಲಿದೆ.
ಈ ರಸ್ತೆ ಉದ್ದಕ್ಕೂ ಇರುವ ಆತಂಕ ಮೂಡಿಸುವ ತಿರುವು ಹಾಗೂ ಹೊಂಡಗಳನ್ನು ಸಮತಟ್ಟು ಮಾಡಿ ಅಗಲೀಕರಣಗೊಳಿಸಲಾಗುವುದು. ರಸ್ತೆಯ ಕಾಮಗಾರಿಯ ಗುತ್ತಿಗೆಯನ್ನು ಕುಂಬಳೆ ನಿವಾಸಿ ಮೊಹಮ್ಮದ್ ಹನೀಫ್ ಪಡೆದುಕೊಂಡಿದ್ದಾರೆ. ಈಗಾಗಲೇ ಗುತ್ತಿಗೆ ದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಸಂದರ್ಶಿಸಿದ್ದಾರೆ. ಅಭಿವೃದ್ದಿಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿರುವ ಕಾಡು ಪೊದೆಗಳನ್ನು ಕಡಿದು ತೆರವುಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ, ಬಳಿಕ ಹೊಂಡವನ್ನು ಮುಚ್ಚಿ ಗುಡ್ಡೆಯನ್ನು ಅಗೆದು ರಸ್ತೆ ಅಗಲೀಕರಣಗೊಳಿಸುವ ಕೆಲಸ ಆರಂಭಿಸಲಿದ್ದಾರೆ.
ಹಲವಾರು ವರ್ಷಗಳಿಂದ ಶೋಚನೀಯವಸ್ಥೆಯಲ್ಲಿರುವ ರಸ್ತೆಯಲ್ಲಿ ಬಸ್ ಸಹಿತ ವಾಹನ ಸಂಚಾರಕ್ಕೆ ತೀರಾ ಸಮಸ್ಯೆಯಾಗಿದೆ. ದುರಸ್ಥಿಗೆ ಹಲವು ವರ್ಷಗಳಿಂದ ನಾಗರಿಕರು ಬೇಡಿಕೆಯಿರಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಇದೀಗ ರಸ್ತೆ ಅಭಿವೃದ್ದಿಗೊಳ್ಳುತ್ತಿರುವುದು ನಾಗರಿಕರಿಗೆ ನೆಮ್ಮದಿಯನ್ನುಂಟುಮಾಡಿದೆ. ಆದರೆ ಮಳೆಗಾಲ ಆರಂಭಗೊAಡ ಹಿನ್ನೆಲೆಯಲ್ಲಿ ರಸ್ತೆ ಇನ್ನಷ್ಟು ಶೋಚನೀಯವಸ್ಥೆಗೆ ತಲುಪುತ್ತಿದ್ದು, ದುರಸ್ಥಿಗೆ ಒತ್ತಾಯಿಸಿದ್ದಾರೆ.