ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಲಿದ್ದು ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತನ್ನ 2ನೇ ಅವಧಿಯ ಕೊನೆಯ ಬಜೆಟ್ ಹಾಗೂ ಮಧ್ಯಂತರ ಬಜೆಟ್ ಅನ್ನು ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದೆ.
ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಲಿರುವ ಮೊದಲ ಬಜೆಟ್ ಇದಾಗಿದ್ದು, ಬೆಳಗ್ಗೆ 11ಗಂಟೆಗೆ ಆರಂಭವಾಗಲಿದೆ. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಿವೆ. ಚುನಾವಣೆಯ ವರ್ಷವಾಗಿರುವುದರಿಂದ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್‌ನ ಬದಲಿಗೆ ಮಧ್ಯಾಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಮಧ್ಯಂತರ ಬಜೆಟ್ ಆದರೂ ಮತದಾರರನ್ನು ಸಂತಸಗೊಳಿಸುವುದರ ಜೊತೆಗೆ ಆರ್ಥಿಕತೆಗೂ ಅನುಕೂಲವಾಗುವ ಹಲವು ಕ್ರಮಗಳನ್ನು ಘೋಷಿಸುವ ನಿರೀಕ್ಷೆಯಿದೆ. ಈ ಬಾರಿಯ ಬಜೆಟ್ ರೈತರು ಮತ್ತು ಮಹಿಳೆಯರಿಗೆ ಹೆಚ್ಚಿನ ಕೊಡುಗೆಯುಳ್ಳ ಮಿಶ್ರಣವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಇನ್ನು ನೂತನ ಸಂಸತ್ತಿನಲ್ಲಿ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನ ತಲುಪಿದ್ದಾರೆ. ಹಾಗೆಯೇ ಮಧ್ಯಂತರ ಬಜೆಟ್ ಪ್ರತಿಗಳು ಪಾರ್ಲಿಮೆಂಟ್ ತಲುಪಿದೆ. ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಭೆಯಲ್ಲಿ ಬಜೆಟ್‌ಗೆ ಸಂಪುಟದ ಒಪ್ಪಿಗೆ ಸಿಗಲಿದೆ. ಸಭೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಪ್ರಮುಖರಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.