‘ಕೊನೆಯ ವಿದಾಯ’..; ಸಿಡ್ನಿಯಿಂದ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್

Share with

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯಗೊಂಡಿದೆ. ಭಾರತ ಸರಣಿಯನ್ನು 1-2 ಅಂತರದಿಂದ ಸೋತು ತನ್ನ ತವರಿಗೆ ವಾಪಸ್ಸಾಗುತ್ತಿದೆ. ಆದಾಗ್ಯೂ ಟೀಂ ಇಂಡಿಯಾದ ಇಬ್ಬರು ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿಗೆ (Virat Kohli) ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸ ಆಗಿದ್ದ ಕಾರಣ ಈ ಸರಣಿ ಇವರಿಬ್ಬರಿಗೆ ಒಂದು ರೀತಿಯ ಭಾವನಾತ್ಮಕ ಕ್ಷಣವಾಗಿತ್ತು. ಸರಣಿ ಭಾರತದ ಕೈತಪ್ಪಿದರೂ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರಿಬ್ಬರು ಇದು ತಮ್ಮ ಕೊನೆಯ ಆಸ್ಟ್ರೇಲಿಯಾ ಪ್ರವಾಸ ಎಂಬುದನ್ನು ಖಚಿತಪಡಿಸಿದ್ದರು. ಇದೀಗ ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಆಸ್ಟ್ರೇಲಿಯಾಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

ಸರಣಿಶ್ರೇಷ್ಠ ಪ್ರಶಸ್ತಿ
ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಅದ್ಭುತವಾಗಿತ್ತು. ಮೊದಲ ಪಂದ್ಯದಲ್ಲಿ ರೋಹಿತ್ ವಿಫಲರಾದರೂ ಉಳಿದೆರಡು ಪಂದ್ಯಗಳಲ್ಲಿ ಗಮನಅರ್ಹ ಪ್ರದರ್ಶನ ನೀಡಿದರು. ಅದರಲ್ಲೂ ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಒಂಬತ್ತು ವಿಕೆಟ್‌ಗಳ ಗೆಲುವಿನಲ್ಲಿ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ರೋಹಿತ್, ಸರಣಿಯಲ್ಲಿ 202 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಮಾತ್ರವಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ
ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗೆ ‘ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ’ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ರೋಹಿತ್ ಅವರ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದ್ದು, ಇದು ರೋಹಿತ್ ಅವರು ಏಕದಿನ ಕ್ರಿಕೆಟ್‌ನಿಂದ ನಿರ್ಗಮಿಸುವುದನ್ನು ಸೂಚಿಸುತ್ತಿದೆಯೇ ಅಥವಾ ಆಸ್ಟ್ರೇಲಿಯಾ ಪ್ರವಾಸದ ಹಳೆಯ ನೆನಪುಗಳನ್ನು ಮತ್ತೆ ಹುಟ್ಟುಹಾಕುತ್ತಿದೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *