ಬೆಂಗಳೂರು, ನವೆಂಬರ್ 14: ಶತಾಯುಷಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (Saalumarada Thimmakka) ಅವರು ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ. ವೃಕ್ಷಮಾತೆ ಅಗಲಿಕೆಗೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಇದೀಗ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ್ತು ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಆದರೆ ಅಂತ್ಯಕ್ರಿಯೆ (funeral) ಎಲ್ಲಿ ನಡೆಯಲಿದೆ ಎಂಬುವುದು ಸದ್ಯ ಗೊಂದಲವಾಗಿದೆ.
114 ವರ್ಷದ ಸಾಲುಮರದ ತಿಮ್ಮಕ್ಕ ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರು ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಅಂತಿಮ ದರ್ಶನಕ್ಕೆ ಎಲ್ಲೆಲ್ಲಿ ವ್ಯವಸ್ಥೆ
ಸಾಲುಮರದ ತಿಮ್ಮಕ್ಕ ಅವರ ಸ್ವಗ್ರಾಮ ರಾಮನಗರ ಜಿಲ್ಲೆಯ ಹುಲಿಕಲ್ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಇಂದು ರಾತ್ರಿ 8 ಗಂಟೆಯಿಂದ ಬೇಲೂರಿನಲ್ಲಿ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.





