ಉಡುಪಿ: ಕಳೆದ ಒಂದು ವರ್ಷದಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ಸೋತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡಾ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದರು.
ಸಮಾಜ ವಿರೋಧಿ ಶಕ್ತಿಗಳಿಗೆ ಧೈರ್ಯವನ್ನು ತುಂಬಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂಬ ಭಾವನೆ ರಾಜ್ಯದ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಹಲವು ಕೊಲೆಗಳು ನಡೆದಿದ್ದು, ಕೊಲೆಗಾರರು ಹೇಗಾದರೂ ಬಚಾವ್ ಆಗುತ್ತೇವೆ ಎಂಬ ವಾತಾವರಣ ನಿರ್ಮಾಣವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಇವೆಲ್ಲಕ್ಕೆ ಕಡಿವಾಣ ಹಾಕುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.