ಮಂಗಳೂರು: ಕಾಮಗಾರಿಯ ಬಿಲ್ ಮೊತ್ತದ ಪಾವತಿಗಾಗಿ 1 ಲಕ್ಷ ರೂಪಾಯಿ ಲಂಚ ಬೇಡಿಕೆ ಮುಂದಿಟ್ಟು ಮತ್ತು ಅದನ್ನು ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕೃಷಿ ಇಲಾಖೆಯ ದ.ಕ ಜಿಲ್ಲಾ ಉಪನಿರ್ದೇಶಕಿ ಭಾರತಮ್ಮನನ್ನು ಲೋಕಾಯುಕ್ತ ಪೊಲೀಸರು ಅ.21 ರಂದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಯಾಗಿದ್ದ ಮತ್ತು ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಕೃಷಿ ಇಲಾಖೆಯಲ್ಲಿ ನಿಯೋಜನೆಯ ಮೇರೆಗೆ ಅಧಿಕಾರಿಯಾಗಿದ್ದ ಪರಮೇಶ್ವರ್ ಎನ್‌ಪಿ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ.
ಸದ್ಯ ಇಲಾಖೆಯಿಂದ ನಿವೃತ್ತರಾಗಿರುವ ಪರಮೇಶ್ಬರ್ ಎನ್‌ಪಿ ಅವರು ಕರ್ತವ್ಯದ ವೇಳೆ 2022-23 ಮತ್ತು 2023-24ನೆ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯಡಿ ಸಜಿಪ ಮುನ್ನೂರು, ಸಜಿಪ ಮೂಡ, ಸಜಿಪ ಪಡು, ಸಜಿಪ ನಡು, ಕುರ್ನಾಡು, ನರಿಂಗಾನ ಬಾಳೆಪುಣಿ, ಮಂಜನಾಡಿ ಗ್ರಾಮಗಳ ಸಾರ್ವಜನಿಕರರಿಗೆ ಸರಕಾರದ ವತಿಯಿಂದ 50 ಲಕ್ಷ ರೂ. ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಿಸಿದ್ದರು. ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕ ಧೋರಿ, ಶಬರೀಶ್ ನರ್ಸರಿಯ ಭೈರೇಗೌಡ ಮುಂತಾದವರಿಂದ ಈ ಸಸಿಗಳನ್ನು ಪಡೆಯಲಾಗಿತ್ತು. ಅವರಿಗೆ ನೀಡಬೇಕಾದ 18 ಲಕ್ಷ ರೂ. ಮತ್ತು ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ್ದ 32 ಲಕ್ಷ ರೂ. ಕೊಡಲು ಬಾಕಿಯಿತ್ತು.
ಈ ನರ್ಸರಿಯ ಮಾಲಕರು ಮತ್ತು ಗುತ್ತಿಗೆದಾರರಿಗೆ ಕೊಡಲು ಬಾಕಿಯಿದ್ದ 50 ಲಕ್ಷ ರೂಪಾಯಿ ಅನ್ನು ನೀಡಲು ಪರಮೇಶ್ವರ್ ಎಸ್‌ಪಿ ಅ.4 ರಂದು ಕೃಷಿ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕಿ ಭಾರತಮ್ಮ ಅವರನ್ನು ಭೇಟಿ ಮಾಡಿ ಹೇಳಿದ್ದರು. ಬಿಲ್‌ನ ಮೊತ್ತ ಪಾವತಿಸಬೇಕಾದರೆ ತನಗೆ ಶೇ.15ರಷ್ಟು ಕಮಿಷನ್ ನೀಡಬೇಕು. ಇಲ್ಲದಿದ್ದರೆ ಬಿಲ್ ಪಾವತಿ ಮಾಡುವುದಿಲ್ಲ ಎಂದು ಭಾರತಮ್ಮ ಹೇಳಿರುವುದಾಗಿ ಆಪಾದಿಸಲಾಗಿದೆ.
ಅ.20ರಂದು ಉಪನಿರ್ದೇಶಕರ ಕಚೇರಿಗೆ ತೆರಳಿ ಬಿಲ್ ಬಗ್ಗೆ ಮಾತನಾಡಿದಾಗ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಮುಂದಿಟ್ಟರು ಎನ್ನಲಾಗಿದೆ. ಅದರಂತೆ ಅ.21 ರಂದು ಕಚೇರಿಯಲ್ಲಿ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೇ ಹಣ ಸಮೇತ ಉಪನಿರ್ದೇಶಕಿ ಭಾರತಮ್ಮ ಅವರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿಗಳಾದ ಕಲಾವತಿ ಮತ್ತು ಚಲವರಾಜು ಬಿ., ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಪಿ. ಪಾಲ್ಗೊಂಡಿದ್ದರು.